ಕೇರಳ : ಕೇರಳ ಕರಾವಳಿಯಲ್ಲಿ ಸಿಂಗಾಪುರ ಮೂಲದ ಹಡಗಿನಲ್ಲಿ ಇಂದು ಬೆಳಗ್ಗೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿರುವ ಕಂಟೇನರ್‌ಗಳಲ್ಲಿ ಸುಡುವ ಘನವಸ್ತುಗಳು, ದ್ರವಗಳು ಮತ್ತು ವಿಷಕಾರಿ ವಸ್ತುಗಳೂ ಸೇರಿದಂತೆ ಅಪಾಯಕಾರಿ ಸರಕುಗಳಿವೆ ಎಂದು ಇಲ್ಲಿನ ಅಝಿಕ್ಕಲ್ ಬಂದರಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂವಿ ವಾನ್ ಹೈ(MV WAN HAI 503) ಎಂಬ ಹೆಸರಿನ ಹಡಗಿನಲ್ಲಿ 22 ಸಿಬ್ಬಂದಿ ಇದ್ದರು. ಈ ಪೈಕಿ 18 ಮಂದಿ ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದಾರೆ. ಹಡಗಿಗೆ ಬೆಂಕಿ ತಗುಲಿರುವ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ಅವರನ್ನು ರಕ್ಷಿಸಿದರು ಎಂದು ರಕ್ಷಣಾ ಇಲಾಖೆಯ ಪಿಆರ್‌ಒ ಹೇಳಿದ್ದಾರೆ. ಇದೀಗ ಹಡಗು ಹೊತ್ತಿ ಉರಿಯುತ್ತಾ ಗುರಿ ತಪ್ಪಿ ತೇಲುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಹಡಗಿನಲ್ಲಿ ಅಪಾಯಕಾರಿ ಸರಕುಗಳಿದ್ದು, ಇವುಗಳಲ್ಲಿ ವರ್ಗ 3 (ದಹನಕಾರಿ ದ್ರವಗಳು), ವರ್ಗ 4.1 (ದಹನಕಾರಿ ಘನ ವಸ್ತುಗಳು), ವರ್ಗ 4.2 (ಸ್ವಯಂ ದಹನಕಾರಿ ವಸ್ತುಗಳು) ಮತ್ತು ವರ್ಗ 4.6 (ವಿಷಕಾರಿ) ವಸ್ತುಗಳಿವೆ ಎಂದು ತಿಳಿದು ಬಂದಿದೆ. ಸಮೀಪದ ಕೋಸ್ಟ್ ಗಾರ್ಡ್ ಸೌಲಭ್ಯ ಕೇಂದ್ರ ಕೋಝಿಕ್ಕೋಡ್ ಜಿಲ್ಲೆಯ ಬೇಪೋರ್ ನಲ್ಲಿದೆ. ಹಾಗಾಗಿ, ಹಡಗಿನಿಂದ ರಕ್ಷಿಸಿರುವ ಸಿಬ್ಬಂದಿಯನ್ನು ಇಲ್ಲಿಗೆ ಕರೆತರುವ ನಿರೀಕ್ಷೆ ಇದೆ ಎಂದು ಅಳಿಕ್ಕಲ್ ಬಂದರಿನ ಅಧಿಕಾರಿ ಕ್ಯಾಪ್ಟನ್ ಅರುಣ್ ಕುಮಾರ್ ಪಿ.ಕೆ ತಿಳಿಸಿದರು.
ಭಾರತೀಯ ಕರಾವಳಿ ರಕ್ಷಣಾ ಪಡೆಯ ಹಡಗುಗಳಾದ ಸಚೇತ್, ಅರ್ನ್ವೇಶ್, ಸಮುದ್ರ ಪ್ರಹರಿ, ಅಭಿನವ್, ರಾಜ್‌ದೂತ್ ಮತ್ತು ಸಿ-144 ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮೊದಲು ಹಡಗಿನಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ನಂತರ ಇದೊಂದು ಬೆಂಕಿ ಅನಾಹುತ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಮುಂಬೈನ ಸಾಗರ ಕಾರ್ಯಾಚರಣೆ ಕೇಂದ್ರವು ಕೊಚ್ಚಿಯಲ್ಲಿರುವ ತಮ್ಮ ಕಚೇರಿಗೆ ಹಡಿನಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಬಗ್ಗೆ ಮೊದಲು ತಿಳಿಸಿತ್ತು. 270 ಮೀಟರ್ ಉದ್ದದ ಈ ಹಡಗು ಮುಂಬೈಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.