ಕೊಚ್ಚಿ: ಲೈಬೀರಿಯನ್ ಧ್ವಜ ಹೊಂದಿದ ಸರಕು ಸಾಗಣೆ ಹಡಗು ರವಿವಾರ ಬೆಳಗಿನ ಜಾವಕೊಚ್ಚಿಯಿಂದ ಸುಮಾರು 38 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆ ಯಾಗಿದೆ. ಇದರಿಂದಾಗಿ ಕೇರಳ ಕರಾವಳಿಯಲ್ಲಿ ಭಾರೀ ಪ್ರಮಾಣದ ತೈಲ ಮತ್ತು ರಾಸಾಯನಿಕ ಸೋರಿಕೆ ಭೀತಿ ಪರಿಸರ ಅಪಾಯ ಎದುರಾಗಿದೆ.ಮುಳುಗಡೆಯಾದ ಹಡಗಿನಲ್ಲಿ 84.44 ಮೆಟ್ರಿಕ್ ಟನ್ ಡೀಸೆಲ್, 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ ನ 640 ಕಂಟೇನರ್ಗಳನ್ನು ಸಾಗಿಸಲಾಗುತ್ತಿತ್ತು. ಅಪಾಯಕಾರಿ ಸರಕು ಮತ್ತು 1. 13 ಕರ್ಬೈಡ್ ಹೊಂದಿರುವ ಕಂಟೇನರ್ಗಳೂ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.
ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿದ್ದ 24 ಮಂದಿ ಸಿಬಂದಿಯನ್ನು ರಕ್ಷಿಸಿದ್ದಾರೆ. ಭಾರೀ ಪ್ರಮಾಣದ ತೈಲ ಮತ್ತು ರಾಸಾಯನಿಕ ಸೋರಿಕೆಯ ಅಪಾಯದ ಬಗ್ಗೆ ಕಳವಳಗಳು ತೀವ್ರಗೊಂಡಿವೆ.ಕೋಸ್ಟಲ್ ಗಾರ್ಡ್ ತನ್ನ ಮಾಲಿನ್ಯ ತಡೆ ಪ್ರತಿಕ್ರಿಯೆ ಹಡಗು 'ಸಕ್ಷಮ್' ಅನ್ನು ಸ್ಥಳದಲ್ಲಿ ನಿಯೋಜಿಸಿದ್ದು, ಸುಧಾರಿತ ತೈಲ ಸೋರಿಕೆ ಮ್ಯಾಪಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಮಾನವನ್ನೂ ಬಳಸಲಾಗುತ್ತಿದೆ.
ಇದುವರೆಗೆ ಯಾವುದೇ ತೈಲ ಸೋರಿಕೆ ಅಧಿಕೃತವಾಗಿ ವರದಿಯಾಗಿಲ್ಲವಾದರೂ ಹಡಗಿನಲ್ಲಿರುವ ಇಂಧನ ಮತ್ತು ಅಪಾಯಕಾರಿ ಸರಕುಗಳಿಂದ ಉಂಟಾಗುವ ಹೆಚ್ಚಿನ ಅಪಾಯದ ಕಾರಣಕ್ಕೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.