image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಾಕ್ ಬಾಹ್ಯಾಕಾಶ ವಿಸ್ತರಣೆ: ಗಡಿ ಕಣ್ಗಾವಲಿಗೆ 52 ಉಪಗ್ರಹಗಳ ನಿಯೋಜನೆಗೆ ಸಿಡಿಎಸ್ ಕರೆ

ಪಾಕ್ ಬಾಹ್ಯಾಕಾಶ ವಿಸ್ತರಣೆ: ಗಡಿ ಕಣ್ಗಾವಲಿಗೆ 52 ಉಪಗ್ರಹಗಳ ನಿಯೋಜನೆಗೆ ಸಿಡಿಎಸ್ ಕರೆ

ನವದೆಹಲಿ : ಚೀನಾ ಮತ್ತು ಟರ್ಕಿಯ ತಾಂತ್ರಿಕ ನೆರವಿನೊಂದಿಗೆ ಪಾಕಿಸ್ತಾನ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ವಿಸ್ತರಿಸುತ್ತಿರುವುದು ಭಾರತದ ಭದ್ರತೆಗೆ ಹೊಸ ಸವಾಲಾಗಿ ಪರಿಣಮಿಸಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಎಚ್ಚರಿಸಿದ್ದಾರೆ. ನವದೆಹಲಿಯ ವಿವೇಕಾನಂದ ಇಂಟರ್‌ನ್ಯಾಶನಲ್ ಫೌಂಡೇಶನ್‌ನಲ್ಲಿ ನಡೆದ 'ಯುದ್ಧದ ಭವಿಷ್ಯ ಮತ್ತು ಬಹು-ಆಯಾಮದ ಕಾರ್ಯಾಚರಣೆಗಳಿಗೆ ಭಾರತದ ಸನ್ನದ್ಧತೆ' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಭಾರತ ತನ್ನ ಬಾಹ್ಯಾಕಾಶ ಆಧಾರಿತ ಮಿಲಿಟರಿ ಸಂಪನ್ಮೂಲಗಳ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸಬೇಕಿದೆ ಎಂದು ಪ್ರತಿಪಾದಿಸಿದರು.

ಪಾಕಿಸ್ತಾನವು ಕೇವಲ ಚೀನಾದ ನೆರವಿನ ಮೇಲೆ ಅವಲಂಬಿತವಾಗದೆ, ತನ್ನದೇ ಆದ 'ಸುಪಾರ್ಕೊ' (SUPARCO) ಸಂಸ್ಥೆಯ ಮೂಲಕ ಸ್ವದೇಶಿ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳುತ್ತಿದ್ದು, ಇದಕ್ಕೆ ಟರ್ಕಿಯ ತಾಂತ್ರಿಕ ಬೆಂಬಲವೂ ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಜನರಲ್ ಸುಬ್ರಮಣಿ ಹೇಳಿದರು. ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣಾ (ISR) ವ್ಯವಸ್ಥೆಗಳು ಹಾಗೂ ನ್ಯಾವಿಗೇಷನ್ ತಂತ್ರಜ್ಞಾನದಲ್ಲಿ ಚೀನಾದ ಸುಧಾರಿತ ಸೌಲಭ್ಯಗಳನ್ನು ಪಾಕಿಸ್ತಾನ ಬಳಸಿಕೊಳ್ಳುವ ಅಪಾಯವಿದ್ದು, ಇದು ಗಡಿಯಲ್ಲಿ ಪಾಕ್ ಸೇನೆಯ ಸನ್ನದ್ಧತೆಯನ್ನು ಹೆಚ್ಚಿಸಲಿದೆ. ಜೊತೆಗೆ ಉಪಗ್ರಹ ನಿಗ್ರಹ (ASAT) ಮತ್ತು ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನಗಳ ಮೂಲಕ ಉಪಗ್ರಹ ಸಂವಹನಕ್ಕೆ ಅಡ್ಡಿಪಡಿಸುವ ಚೀನಾದ ಸಾಮರ್ಥ್ಯದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

ಚೀನಾದೊಂದಿಗೆ ನೇರ ಸ್ಪರ್ಧೆಗಿಳಿಯುವ ಬದಲು, ಗಡಿಗಳ ಮೇಲೆ ನಿರಂತರ ನಿಗಾ ಇಡಲು ಮತ್ತು ಉಪಗ್ರಹಗಳ ಮರು-ಪರಿಶೀಲನಾ ಸಮಯವನ್ನು ಕಡಿಮೆ ಮಾಡಲು ಅಗತ್ಯವಿರುವಷ್ಟು ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿ ಹೊಂದಿರುವುದಾಗಿ ಸಿಡಿಎಸ್ ಸ್ಪಷ್ಟಪಡಿಸಿದರು. ಬಾಹ್ಯಾಕಾಶ ಕಣ್ಗಾವಲು ಜಾಲವನ್ನು ಬಲಪಡಿಸಲು 26,968 ಕೋಟಿ ರೂಪಾಯಿ ವೆಚ್ಚದ 'ಸ್ಪೇಸ್ ಬೇಸ್ಡ್ ಸರ್ವೈಲೆನ್ಸ್ (SBS) ಹಂತ-3' ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ 52 ಮೀಸಲು ಮಿಲಿಲಿಟರಿ ಉಪಗ್ರಹಗಳನ್ನು ನಿಯೋಜಿಸಲಾಗುವುದು.

ರಕ್ಷಣಾ ಬಾಹ್ಯಾಕಾಶ ಸಂಸ್ಥೆ (DSA) ನೇತೃತ್ವದ ಈ ಯೋಜನೆಯ ಒಟ್ಟು 52 ಉಪಗ್ರಹಗಳ ಪೈಕಿ 21 ಉಪಗ್ರಹಗಳನ್ನು ಇಸ್ರೋ (ISRO) ನಿರ್ಮಿಸಿ ಉಡಾವಣೆ ಮಾಡಿದರೆ, ಉಳಿದ 31 ಉಪಗ್ರಹಗಳನ್ನು ದೇಶೀಯ ಖಾಸಗಿ ಕಂಪನಿಗಳು ನಿರ್ಮಿಸಲಿವೆ.

Category
ಕರಾವಳಿ ತರಂಗಿಣಿ