ಛತ್ರಪತಿ ಸಂಭಾಜಿನಗರ: ಜಗತ್ತಿನ ಪ್ರಬಲ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಇತರ ರಾಷ್ಟ್ರಗಳನ್ನು ಒತ್ತಡದಲ್ಲಿಡುತ್ತವೆ, ಹೀಗಾಗಿ ಭಾರತ ಬೆಳೆಯುವುದನ್ನು ಅವು ಇಷ್ಟಪಡುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಎಂಐಟಿ ಕ್ಯಾಂಪಸ್ನ ಮಂಥನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ 5ನೇ 'ಪದ್ಮಾ ಉತ್ಸವ'ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ದಬ್ಬಾಳಿಕೆ ನಡೆಸುವ ರಾಜಕಾರಣಕ್ಕೂ, ಸಂಕಷ್ಟದ ಸಮಯದಲ್ಲಿ ಶತ್ರು ರಾಷ್ಟ್ರಗಳಿಗೂ ಮಾನವೀಯ ಹಾಗೂ ಆರ್ಥಿಕ ನೆರವು ನೀಡುವ ಭಾರತದ ನಾಗರಿಕತೆಯ ಧೋರಣೆಗೂ ಇರುವ ವ್ಯತ್ಯಾಸವನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಪ್ರಬಲ ರಾಷ್ಟ್ರಗಳು 'ಬಲಿಷ್ಠರೇ ಉಳಿಯುತ್ತಾರೆ' ಎಂಬ ತತ್ವವನ್ನು ನಂಬಿಕೊಂಡು ಇತರ ದೇಶಗಳ ಮೇಲೆ ಒತ್ತಡ ಹೇರುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತವೆ. ಆದರೆ ಭಾರತ ಎಲ್ಲರಿಗೂ ಸಹಾಯ ಮಾಡುವ ಮನೋಭಾವ ಹೊಂದಿರುವುದರಿಂದ, ಭಾರತ ಪ್ರಗತಿ ಸಾಧಿಸಿದರೆ ಈ ಪ್ರಬಲ ಶಕ್ತಿಗಳ 'ಅಂಗಡಿಗಳು' ಮುಚ್ಚಿಹೋಗುತ್ತವೆ ಎಂದು ಭಾಗವತ್ ಹೇಳಿದರು.
ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತುರ್ತು ಸಂದರ್ಭಗಳಲ್ಲಿ ಭಾರತ ನೆರೆಯ ರಾಷ್ಟ್ರಗಳಿಗೆ ನೆರವಾದ ನಿದರ್ಶನಗಳನ್ನು ಅವರು ಸ್ಮರಿಸಿದರು. ಮಾಲ್ಡೀವ್ಸ್ಗೆ ಕುಡಿಯುವ ನೀರು ಪೂರೈಸಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾಕ್ಕೆ ನೆರವಾಗಿದ್ದು, ಪರಿಸರ ಸಮಸ್ಯೆ ಎದುರಿಸುತ್ತಿರುವ ನೇಪಾಳ ಹಾಗೂ ಬಾಂಗ್ಲಾದೇಶಕ್ಕೆ ಸಹಾಯ ಹಸ್ತ ಚಾಚಿದ್ದನ್ನು ಅವರು ಉಲ್ಲೇಖಿಸಿದರು. ಅಲ್ಲದೆ, ಪ್ರವಾಹ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಭಾರತ ಪಾಕಿಸ್ತಾನಕ್ಕೂ ನೆರವು ನೀಡಿದೆ ಎಂದು ತಿಳಿಸಿದ ಅವರು, ದುರ್ಬಲರ ರಕ್ಷಣೆ ಮತ್ತು ಶಾಂತಿ ಸ್ಥಾಪನೆಯೇ ನಿಜವಾದ ಶಕ್ತಿ ಎಂದು ಭಾರತ ನಂಬಿದೆ ಎಂದರು.
ದೇಶವನ್ನು ಶ್ರೇಷ್ಠವಾಗಿಸಲು ಬಯಸುವ ಇಂದಿನ ಯುವಜನತೆ ಸುಳ್ಳನ್ನು ದ್ವೇಷಿಸುತ್ತಾರೆ ಮತ್ತು ಪ್ರಾಮಾಣಿಕತೆಯನ್ನು ಬೆಂಬಲಿಸುತ್ತಾರೆ ಎಂದು ಭಾಗವತ್ ಹೇಳಿದರು. ಇದೇ ವೇಳೆ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪದ್ಮ ಪ್ರಶಸ್ತಿ ಪುರಸ್ಕೃತರ ನಿಸ್ವಾರ್ಥ ಸೇವಾ ಮನೋಭಾವವನ್ನು ಯುವ ನಾಗರಿಕರು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.