ಬಿಹಾರ : ವರ್ಷಗಳ ಕಾಲ ಕಾಯುತ್ತಿದ್ದ ಬಿಹಾರದ ಜನರ ಬಹುನಿರೀಕ್ಷಿತ ಕನಸಿನ ಯೋಜನೆಯೊಂದು ಕೊನೆಗೂ ನನಸಾಗಿದೆ. ಬರೋಬ್ಬರಿ 14 ವರ್ಷಗಳ ನಿರ್ಮಾಣ ಹಂತದ ಬಳಿಕ, ಗಂಗಾ ನದಿಯ ಮೇಲೆ ನಿರ್ಮಿಸಲಾಗಿರುವ 9.76 ಕಿಲೋಮೀಟರ್ ಉದ್ದದ ಆರು ಪಥಗಳ ಕೇಬಲ್ ಆಧಾರಿತ ‘ನಿತೀಶ್ ಸೇತು’ (Nitish Setu) ಲೋಕಾರ್ಪಣೆಗೊಂಡಿದ್ದು, ವೈಶಾಲಿ ಮತ್ತು ಪಾಟ್ನಾ ನಡುವಿನ ಸಂಪರ್ಕಕ್ಕೆ ಹೊಸ ದಾರಿ ತೆರೆದಿದೆ. ವೈಶಾಲಿ ಜಿಲ್ಲೆಯ ಬಿಡುಪುರ ಬ್ಲಾಕ್ನಿಂದ ಪಾಟ್ನಾ ಹೊರವಲಯದ ಕಚ್ಚಿ ದರ್ಗಾ ಪ್ರದೇಶವನ್ನು ಸಂಪರ್ಕಿಸುವ ಈ ಬೃಹತ್ ಸೇತುವೆಯು ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಚಾರ ವ್ಯವಸ್ಥೆಯನ್ನು ಬಲಪಡಿಸಲಿದ್ದು, ನಿತ್ಯ ಪ್ರಯಾಣಿಕರು, ವ್ಯಾಪಾರಿಗಳು ಹಾಗೂ ವಾಹನ ಸವಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತಾವಧಿಯಲ್ಲಿ ರೂಪುಗೊಂಡ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಅವರ ಗೌರವಾರ್ಥವಾಗಿ ‘ನಿತೀಶ್ ಸೇತು’ ಎಂದು ನಾಮಕರಣ ಮಾಡಲಾಗಿದೆ. ಈ ಐತಿಹಾಸಿಕ ಸೇತುವೆಯ ಉದ್ಘಾಟನೆಗಾಗಿ ಬಿಹಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಇಬ್ಬರೂ ನಾಯಕರು ಅಪ್ಪಿಕೊಂಡು ನಗುಮುಖದಿಂದ ಮಾತುಕತೆ ನಡೆಸಿದ ಕ್ಷಣ ಗಮನ ಸೆಳೆಯಿತು. ಈ ಭೇಟಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದು ಸಂತೋಷ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಈ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಬಿಹಾರಕ್ಕೆ ಸುಮಾರು ₹34,470 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕೊಡುಗೆ ನೀಡಿದ್ದಾರೆ. ರಸ್ತೆ, ಇಂಧನ, ನಗರ ಮೂಲಸೌಕರ್ಯ, ಜಲಸಂಪನ್ಮೂಲ, ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳ ಹಲವು ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರೊಂದಿಗೆ, ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡಲು 100 ಪಿಎಂ-ಇಬಸ್ಗಳಿಗೆ ಹಸಿರು ನಿಶಾನೆ ತೋರಿಸಲಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 26,900ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮನೆ ಪ್ರವೇಶ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.