image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಕ್ತಸಂಬಂಧಿ ವಿವಾಹಗಳ ದುಷ್ಪರಿಣಾಮ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ರಕ್ತಸಂಬಂಧಿ ವಿವಾಹಗಳ ದುಷ್ಪರಿಣಾಮ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹಗಳಿಂದ (ಸೋದರ ಸಂಬಂಧಿ, ಸೋದರಮಾವ-ಸೊಸೆ ವಿವಾಹ) ಹುಟ್ಟುವ ಮಕ್ಕಳಲ್ಲಿ ಉಂಟಾಗುವ ಆನುವಂಶಿಕ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ (ಎನ್‌ಎಲ್‌ಎಸ್‌ಐಯು) ವಿದ್ಯಾರ್ಥಿನಿ ಚಾರ್ವಿ ಎಸ್. ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ನಡೆಸಿತು. ವಿವಾಹವು ವೈಯಕ್ತಿಕ ಆಯ್ಕೆಯಾಗಿದ್ದು, ಈ ಕುರಿತು ಕಾನೂನು ರೂಪಿಸುವುದು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದ ಪೀಠ, ಸರ್ಕಾರಕ್ಕೆ ನೇರ ಆದೇಶ ನೀಡದೆ ಕೇವಲ ಜಾಗೃತಿ ಮೂಡಿಸುವ ಉದ್ದೇಶದಿಂದ ನೋಟಿಸ್ ನೀಡಲಾಗುತ್ತಿದೆ ಎಂದು ತಿಳಿಸಿತು. ಅಲ್ಲದೆ, ಇಂತಹ ವಿವಾಹಗಳ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜು ಪಠ್ಯಕ್ರಮದ ಮೂಲಕ ವೈಜ್ಞಾನಿಕ ಅರಿವು ಮೂಡಿಸುವ ಅಥವಾ ಸೂಕ್ತ ಕಾನೂನು ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

ರಕ್ತಸಂಬಂಧಿ ದಂಪತಿಯ ಪುತ್ರಿಯಾಗಿರುವ 20 ವರ್ಷದ ಚಾರ್ವಿ, ಹುಟ್ಟಿನಿಂದಲೇ ಶೇ. 40ರಷ್ಟು ಆನುವಂಶಿಕ ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಪ್ರಕಾರ ದೇಶದಲ್ಲಿ ಶೇ. 11ರಷ್ಟು ಹಾಗೂ ದಕ್ಷಿಣ ಭಾರತದಲ್ಲಿ ಶೇ. 23ರಿಂದ 28ರಷ್ಟು ರಕ್ತಸಂಬಂಧಿ ವಿವಾಹಗಳು ನಡೆಯುತ್ತಿವೆ. ಹಿಂದೂ ವಿವಾಹ ಕಾಯಿದೆ-1955ರ ಸೆಕ್ಷನ್ 5(4), 5(5) ಮತ್ತು ವಿಶೇಷ ವಿವಾಹ ಕಾಯಿದೆ-1954ರ ಸೆಕ್ಷನ್ 4(ಡಿ) ಅಡಿಯಲ್ಲಿ ಸಂಪ್ರದಾಯದ ಹೆಸರಿನಲ್ಲಿರುವ ವಿನಾಯಿತಿಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮಕ್ಕಳನ್ನು ಆನುವಂಶಿಕ ಅಪಾಯಕ್ಕೆ ದೂಡುವುದು ಸಂವಿಧಾನದ 14, 21 ಮತ್ತು 47ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದೆ.

ಈಗಾಗಲೇ ನಡೆದಿರುವ ವಿವಾಹಗಳಿಗೆ ಯಾವುದೇ ಕಾನೂನು ಧಕ್ಕೆಯಾಗದಂತೆ, ವಿವಾಹಪೂರ್ವ ಆನುವಂಶಿಕ ಸಮಾಲೋಚನೆ ಮತ್ತು ಸ್ವಯಂಪ್ರೇರಿತ ತಪಾಸಣೆಗೆ ಮಾರ್ಗಸೂಚಿ ರೂಪಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಕಾದಂಬರಿ ಸಿಂಗ್, ಜಾಗೃತಿ ಕಡಿಮೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಪದ್ಧತಿ ಇನ್ನೂ ಸಾಮಾನ್ಯವಾಗಿದ್ದು, ವ್ಯಾಪಕ ಪ್ರಚಾರದ ಮೂಲಕ ಜನರಿಗೆ ಇದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕೆಂದು ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ