ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದೆ. ಮಹಿಳಾ ಮತದಾರರನ್ನು ಸೆಳೆಯಲು ಮತ್ತು ತಳಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳಾ ವಿಸ್ತಾರಕರನ್ನು ನಿಯೋಜಿಸಲು ಪಕ್ಷ ಮಹತ್ವದ ಯೋಜನೆ ರೂಪಿಸಿದೆ.
ಈ ಅಭಿಯಾನದ ಅಡಿಯಲ್ಲಿ ಮಹಿಳಾ ಕಾರ್ಯಕರ್ತೆಯರು ಪ್ರತಿ ಗ್ರಾಮ ಮತ್ತು ಮನೆಮನೆಗೆ ಭೇಟಿ ನೀಡಿ ಮಹಿಳೆಯರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಜನಕಲ್ಯಾಣ ಯೋಜನೆಗಳು, ಮಹಿಳಾ ಸುರಕ್ಷತೆ, ಕಲ್ಯಾಣ ಹಾಗೂ ಸಬಲೀಕರಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ, ಸರ್ಕಾರದ ಸಾಧನೆಗಳನ್ನು ತಲುಪಿಸುವ ಜವಾಬ್ದಾರಿಯನ್ನೂ ವಿಸ್ತಾರಕರಿಗೆ ವಹಿಸಲಾಗಿದೆ.
ಕೇವಲ ಮತದಾರರನ್ನು ತಲುಪುವುದು ಮಾತ್ರವಲ್ಲದೆ, ಪಕ್ಷದ ಸಂಘಟನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದಕ್ಕೂ ಬಿಜೆಪಿ ಒತ್ತು ನೀಡಿದೆ. ಸಂಘಟನಾ ಹಂತದಲ್ಲಿ ನೇಮಕವಾಗುವ ಒಟ್ಟು ವಿಸ್ತಾರಕರ ಪೈಕಿ ಶೇ.50ರಷ್ಟು ಮಹಿಳೆಯರು ಇರಬೇಕು ಎಂಬ ಗುರಿಯನ್ನು ಪಕ್ಷ ಹೊಂದಿದೆ. ಈ ಮೂಲಕ ಬೂತ್ ಮಟ್ಟದಿಂದ ವಿಧಾನಸಭಾ ಕ್ಷೇತ್ರದವರೆಗೆ ಮಹಿಳಾ ಕಾರ್ಯಕರ್ತೆಯರ ಜಾಲವನ್ನು ವಿಸ್ತರಿಸಲು ಯೋಜಿಸಲಾಗಿದೆ.
ಚುನಾವಣಾ ಸಿದ್ಧತೆಗಳಿಗೆ ವೇಗ ನೀಡಲು ಬಿಜೆಪಿ ಮಹಿಳಾ ಮೋರ್ಚಾ ನವೆಂಬರ್ 20ರಂದು ಲಕ್ನೋದಲ್ಲಿ ರಾಜ್ಯಮಟ್ಟದ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಭಾಗವಹಿಸಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ, ರಾಜ್ಯ ಸಹ-ಉಸ್ತುವಾರಿ ಹಾಗೂ ರಾಜ್ಯಸಭಾ ಸಂಸದೆ ಮೇಧಾ ಕುಲಕರ್ಣಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸರೋಜ್ ಕುಶ್ವಾಹ ಸೇರಿದಂತೆ ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಹಿಳಾ ಮೋರ್ಚಾದ ಜವಾಬ್ದಾರಿ, ಸಂಘಟನೆಯ ವಿಸ್ತರಣೆ, ಕಾರ್ಯಕರ್ತರ ಪಾತ್ರ ಹಾಗೂ ಪಕ್ಷದ ವಿವಿಧ ಘಟಕಗಳ ನಡುವೆ ಸಮನ್ವಯ ಸಾಧಿಸುವ ಕುರಿತು ಈ ಕಾರ್ಯಾಗಾರದಲ್ಲಿ ಮಹತ್ವದ ಚರ್ಚೆ ನಡೆಯಲಿದೆ.