image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

2014ರ ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡದಂತೆ ಹಿರಿಯ ನಾಯಕರು ಸಲಹೆ ನೀಡಿದ್ದರು: ರಾಹುಲ್ ಗಾಂಧಿ

2014ರ ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡದಂತೆ ಹಿರಿಯ ನಾಯಕರು ಸಲಹೆ ನೀಡಿದ್ದರು: ರಾಹುಲ್ ಗಾಂಧಿ

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿದ್ದರೂ, ಈ ಕುರಿತು ಬಹಿರಂಗವಾಗಿ ಮಾತನಾಡದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ತಮಗೆ ಸಲಹೆ ನೀಡಿದ್ದರು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳ ಆರೋಪಗಳಿದ್ದರೂ ಕಾಂಗ್ರೆಸ್ ಪಕ್ಷವು ಚುನಾವಣೆಗಳನ್ನು ಬಹಿಷ್ಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. "ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಕ್ಷಣ ಭಾರತೀಯ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿದಂತಾಗುತ್ತದೆ. ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವುದನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಇದಕ್ಕಾಗಿ ರಾಜಕೀಯವಾಗಿ ಹಿನ್ನಡೆ ಅನುಭವಿಸಬೇಕಾಗಿ ಬಂದರೂ ಹೋರಾಟ ಮುಂದುವರಿಸುತ್ತೇವೆ; ಆದರೆ ವ್ಯವಸ್ಥೆಯನ್ನೇ ಮುರಿಯಲು ನಾವು ಬಯಸುವುದಿಲ್ಲ" ಎಂದು ಅವರು ತಿಳಿಸಿದರು.

2014ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರಸ್ತಾಪಿಸಿದ ಅವರು, ಅಂದು ಕಂಡುಬಂದ ಗೆಲುವಿನ ಅಂತರಗಳು ಅಸಹಜವಾಗಿದ್ದವು ಮತ್ತು ಅವುಗಳಿಗೆ ಸಮಂಜಸವಾದ ವಿವರಣೆ ಸಿಗುತ್ತಿರಲಿಲ್ಲ. ಆರಂಭದಲ್ಲಿ ಪಕ್ಷದೊಳಗೆ ಅನುಮಾನಗಳು ಮೂಡಿದರೂ ಸಾಕ್ಷ್ಯಗಳಿರಲಿಲ್ಲ; ನಂತರ ಸಾಕ್ಷ್ಯಗಳು ಲಭ್ಯವಾದಾಗ ಅದನ್ನು ಹಿರಿಯ ನಾಯಕರ ಮುಂದಿಟ್ಟೆ. ಆದರೆ, ಈ ಬಗ್ಗೆ ಮಾತನಾಡದಂತೆ ಅವರು ಸಲಹೆ ನೀಡಿದರು ಎಂದರು. ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಎತ್ತುವುದು ಸುಲಭದ ಕೆಲಸವಲ್ಲ, ವ್ಯವಸ್ಥೆಯಲ್ಲಿ ದೋಷವಿದೆ ಎಂದು ಹೇಳಲು ಶೇ. 100, 200 ಅಥವಾ 300ರಷ್ಟು ಖಚಿತವಾದ ಸಾಕ್ಷ್ಯ ಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಇದೇ ವೇಳೆ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆಯೂ ಮಾತನಾಡಿದ ರಾಹುಲ್, ಆಯೋಗದ ಒಳಗಿನಿಂದಲೇ ಪ್ರತಿಪಕ್ಷಗಳಿಗೆ ಮಾಹಿತಿ ಲಭ್ಯವಾಗುತ್ತಿದೆ ಎಂದು ತಿಳಿಸಿದರು. ಈಗಿನ ಪರಿಸ್ಥಿತಿಯಲ್ಲಿ ಕೆಲಸ ಮುಂದುವರಿಸಲು ಸಾಧ್ಯವಿಲ್ಲ ಎಂದು ಆಯೋಗದ ಹಿರಿಯ ಅಧಿಕಾರಿಗಳೇ ಅಸಮಾಧಾನ ಹಾಗೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ಈ ವ್ಯವಸ್ಥೆಯ ಪತನಕ್ಕೆ ಹೆಚ್ಚು ಕಾಲ ಬೇಕಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

Category
ಕರಾವಳಿ ತರಂಗಿಣಿ