image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕೋನಸೀಮಾ ಜಿಲ್ಲೆಯ ಒಎನ್‌ಜಿಸಿ ಅನಿಲ ಬಾವಿಯಲ್ಲಿ ಭಾರಿ ಅನಿಲ ಸೋರಿಕೆ: 800 ಜನರ ಸ್ಥಳಾಂತರ

ಕೋನಸೀಮಾ ಜಿಲ್ಲೆಯ ಒಎನ್‌ಜಿಸಿ ಅನಿಲ ಬಾವಿಯಲ್ಲಿ ಭಾರಿ ಅನಿಲ ಸೋರಿಕೆ: 800 ಜನರ ಸ್ಥಳಾಂತರ

ಆಂಧ್ರಪ್ರದೇಶ : ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಗೆದ್ದಾಡ ಗ್ರಾಮದ ಬಳಿಯಿರುವ ಒಎನ್‌ಜಿಸಿ (ONGC) ಅನಿಲ ಬಾವಿಯಲ್ಲಿ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಾವಿಯ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಸುಮಾರು 400 ರಿಂದ 500 ಮನೆಗಳ ಅಂದಾಜು 800 ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 216 (NH-216) ರ ಸಮೀಪವಿರುವ ಈ ಅನಿಲ ಬಾವಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಬೆಳಗ್ಗೆ 5 ಗಂಟೆ ಸುಮಾರಿಗೆ ಏಕಾಏಕಿ ಅನಿಲ ಸೋರಿಕೆ ಆರಂಭವಾಗಿದೆ ಎಂದು ಒಎನ್‌ಜಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿದಿದ್ದು, ಬೆಂಕಿ ಅನಾಹುತ ತಪ್ಪಿಸಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು 'ನೀರಿನ ಹೊದಿಕೆ' (ವಾಟರ್ ಬ್ಲಾಂಕೆಟ್) ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಸೋರಿಕೆಯನ್ನು ತಡೆಯಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮಹೇಶ್ ಕುಮಾರ್ ರವಿರಾಲ, ಸಂಜೆಯ ವೇಳೆಗೆ ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳು ಯಾವುದೇ ವಿದ್ಯುತ್ ಉಪಕರಣಗಳು, ದೀಪಗಳು ಅಥವಾ ಗ್ಯಾಸ್ ಸ್ಟವ್‌ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ, ಸುರಕ್ಷಿತ ಶಿಬಿರಗಳಿಗೆ ಸ್ಥಳಾಂತರಗೊಂಡಿರುವ ನಿವಾಸಿಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ವರದಿಯಾದ ಒಎನ್‌ಜಿಸಿ ಅನಿಲ ಸೋರಿಕೆಯ ಕನಿಷ್ಠ ನಾಲ್ಕನೇ ಪ್ರಕರಣ ಇದಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Category
ಕರಾವಳಿ ತರಂಗಿಣಿ