image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ವಾಪಸಾತಿ: ಭಾರತದಿಂದ ಎರಡು ಪ್ರಮುಖ ಷರತ್ತು

ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ವಾಪಸಾತಿ: ಭಾರತದಿಂದ ಎರಡು ಪ್ರಮುಖ ಷರತ್ತು

ನವದೆಹಲಿ : 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ನವದೆಹಲಿಯಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ, ಇದೀಗ ಮುಂಬರುವ ಡಿಸೆಂಬರ್‌ನಲ್ಲಿ ಸ್ವದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಭಾರತ ಸರ್ಕಾರವು ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿದೆ ಎಂದು 'ಬಿಬಿಸಿ ಬಾಂಗ್ಲಾ' ವರದಿ ಮಾಡಿದೆ.

ಭಾರತ ವಿಧಿಸಿರುವ ಮೊದಲ ಷರತ್ತಿನ ಪ್ರಕಾರ, ಶೇಖ್ ಹಸೀನಾ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆದೊಯ್ಯುವ ಸಂಪೂರ್ಣ ಜವಾಬ್ದಾರಿಯನ್ನು ಬಾಂಗ್ಲಾದೇಶ ಸೇನೆಯೇ ವಹಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಸೇನಾ ವಿಮಾನವನ್ನೇ ಬಳಸಬೇಕು. 2024ರ ಆಗಸ್ಟ್ 5ರಂದು ತೀವ್ರ ಪ್ರತಿಭಟನೆಗಳ ನಡುವೆ ಅವರು ಸೇನಾ ವಿಮಾನದಲ್ಲೇ ಢಾಕಾದಿಂದ ಹೊರಬಂದ ಮಾದರಿಯಲ್ಲೇ ಈ ವಾಪಸಾತಿಯೂ ನಡೆಯಬೇಕು ಎಂಬುದು ಭಾರತದ ನಿಲುವಾಗಿದೆ. ಎರಡನೇ ಷರತ್ತಿನ ಪ್ರಕಾರ, 2024ರ ಜುಲೈ-ಆಗಸ್ಟ್ ದಂಗೆಯ ವೇಳೆ ನಡೆದ ಹತ್ಯೆಗಳಿಗೆ ಸಂಬಂಧಿಸಿದ ಆರೋಪಗಳಡಿ ತಮಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಾಗೂ ಹೊಸದಾಗಿ ನ್ಯಾಯಯುತ ವಿಚಾರಣೆ ಎದುರಿಸಲು ಢಾಕಾ ಸರ್ಕಾರವು ಹಸೀನಾ ಅವರಿಗೆ ಸಂಪೂರ್ಣ ಅವಕಾಶ ನೀಡಬೇಕು ಎಂದು ಭಾರತ ತಿಳಿಸಿದೆ. 2025ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಹಸೀನಾ ಅವರ ಗೈರುಹಾಜರಿಯಲ್ಲಿ ಈ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಅವರು ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದಾರೆ.

ಮತ್ತೊಂದೆಡೆ, ಈ ಕುರಿತು ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಸಚಿವ ಅಸದುಜ್ಜಮಾನ್, ಹಸೀನಾ ಅವರ ವಾಪಸಾತಿಯು ಸಂಪೂರ್ಣವಾಗಿ ಕಾನೂನು ಚೌಕಟ್ಟು ಮತ್ತು ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅಡಿಯಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಶಿಕ್ಷೆಗೊಳಗಾದ ಅಪರಾಧಿಯಾಗಿರುವ ಕಾರಣ ಹೊಸ ಪಾಸ್‌ಪೋರ್ಟ್ ನೀಡುವಂತೆ ಹಸೀನಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಢಾಕಾ, ಹಸ್ತಾಂತರ ಪ್ರಕ್ರಿಯೆಯ ಮೂಲಕವೇ ಅವರನ್ನು ಕರೆತರಲಾಗುವುದು ಎಂದಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ದ್ವಿಪಕ್ಷೀಯ ವಿಷಯಗಳ ಕುರಿತು ಬಾಂಗ್ಲಾದೇಶದೊಂದಿಗೆ ಚರ್ಚಿಸಲು ಸಿದ್ಧವಿದೆ ಎಂದು ತಿಳಿಸಿದ್ದು, ಹಸೀನಾ ಅವರ ವಾಪಸಾತಿ ಮತ್ತು ಭದ್ರತಾ ಖಾತರಿಗಳ ಕುರಿತು ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

Category
ಕರಾವಳಿ ತರಂಗಿಣಿ