ನವದೆಹಲಿ : ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಕೊಲಂಬಿಯಾ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾದ ಪ್ರಮುಖ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, ನವೆಂಬರ್ 17ರಂದು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸಂವಾದದಲ್ಲಿ ಜಾಗತಿಕ ವಿದ್ಯಾರ್ಥಿ ಚಳವಳಿಗಳು, ಪ್ರಜಾಪ್ರಭುತ್ವ, ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕತೆಯ ಮೇಲಿನ ಅದರ ಪರಿಣಾಮಗಳ ಕುರಿತು ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದಿದ್ದಾರೆ.
ನವೆಂಬರ್ 18ರಂದು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಎರಡನೇ ಕಾರ್ಯಕ್ರಮದಲ್ಲಿ ಭೌಗೋಳಿಕ ರಾಜಕೀಯ (Geopolitics) ವಿಷಯದ ಪ್ರಸಿದ್ಧ ತಜ್ಞ ಡಾ. ರಾಬರ್ಟ್ ಪೇಪ್ ಅವರೊಂದಿಗೆ ರಾಹುಲ್ ಗಾಂಧಿ ಜಾಗತಿಕ ವಿದ್ಯಮಾನಗಳು ಹಾಗೂ ಮಧ್ಯಪ್ರಾಚ್ಯ ಸ್ಥಿತ್ಯಂತರಗಳ ಕುರಿತು ಚರ್ಚಿಸಲಿದ್ದಾರೆ. ಇನ್ನು ವಿದೇಶಿ ನೆಲದಲ್ಲಿ ರಾಹುಲ್ ಭಾರತವನ್ನು ಅವಮಾನಿಸುತ್ತಿದ್ದಾರೆ ಎಂಬ ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದ ಪಿತ್ರೋಡಾ, "ಇಂದಿನ ಡಿಜಿಟಲ್ ಯುಗದಲ್ಲಿ ಸ್ಥಳೀಯ ಮತ್ತು ಜಾಗತಿಕ ವಿಷಯಗಳ ನಡುವೆ ವ್ಯತ್ಯಾಸವಿಲ್ಲ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ಒಬ್ಬ ಜಾಗತಿಕ ನಾಯಕರಾಗಿ ವಿಶ್ವದೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ಸತ್ಯಾಂಶಗಳನ್ನು ಮಂಡಿಸುವುದು ಅವರ ನೈತಿಕ ಜವಾಬ್ದಾರಿಯಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.