ಆಂಧ್ರಪ್ರದೇಶ : ದೇಶದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಯಲು ₹500 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೇವಲ ₹100 ಮತ್ತು ₹200 ಮೌಲ್ಯದ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿಟ್ಟು, ₹500, ₹1000 ಹಾಗೂ ₹2000 ನೋಟುಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಅತಿ ಹೆಚ್ಚಿನ ಮುಖಬೆಲೆಯ ನಗದು ಚಲಾವಣೆಗೆ ಕಡಿವಾಣ ಹಾಕಿ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಿದರೆ ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಬಹುದು ಎಂದು ಅವರು ತಿಳಿಸಿದ್ದಾರೆ.
2016ರ ಐತಿಹಾಸಿಕ ನೋಟು ಅಮಾನ್ಯೀಕರಣಕ್ಕೆ (Demonetisation) 10 ವರ್ಷಗಳು ತುಂಬಿದ ಬೆನ್ನಲ್ಲೇ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥರಿಂದ ಈ ಹೇಳಿಕೆ ಬಂದಿದೆ. ಇನ್ನೊಂದೆಡೆ, ನೋಟು ರದ್ದತಿಗೆ ದಶಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿದಾಯ್ದಿವೆ. ಈ ನಿರ್ಧಾರವು ದೇಶದ ಆರ್ಥಿಕತೆಗೆ ದೊಡ್ಡ ವಿಪತ್ತಾಗಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿಕಾರಿದ್ದರೆ, ನೋಟುಬಂದಿಯ ಸಾಧನೆಗಳೇನು ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.