ನವದೆಹಲಿ : ಬಾಂಗ್ಲಾದೇಶದ ಮಣ್ಣಿನಲ್ಲಿ ನಿಂತು ಚೀನಾ ಪ್ರಜೆಗಳು ಭಾರತದ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಅಪಪ್ರಚಾರ ಹಾಗೂ ಕುತಂತ್ರದ ವಿರುದ್ಧ ಭಾರತ ಸರ್ಕಾರ ತೀವ್ರ ಕಠಿಣ ನಿಲುವು ತಳೆದಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಅತ್ಯಂತ ಬಡ ಮತ್ತು ಕೊಳಚೆ ಪ್ರದೇಶಗಳ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು 'ಭಾರತದ ನವದೆಹಲಿ' ಎಂದು ಜಗತ್ತಿಗೆ ಸುಳ್ಳು ಬಿಂಬಿಸುತ್ತಿರುವ ಚೀನಾ ಪ್ರಜೆಗಳ ಕೃತ್ಯಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ (MEA) ತೀವ್ರ ಆಕ್ರೋಶ ಹೊರಹಾಕಿದೆ. ಯಾವುದೇ ದೇಶದ ಬಗ್ಗೆ ಇಂತಹ ದಾರಿತಪ್ಪಿಸುವ ಚಿತ್ರಣ ನೀಡುವುದು ದುರದೃಷ್ಟಕರ ಎಂದಿರುವ ಭಾರತ, ಬಾಂಗ್ಲಾ ಆಡಳಿತವು ಇಂತಹ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದ 'ಪ್ರಥೋಮ್ ಅಲೋ' ಪತ್ರಿಕೆಯ ರಹಸ್ಯ ತನಿಖೆಯಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಸುಮಾರು 150 ಕ್ಕೂ ಹೆಚ್ಚು ಚೀನಾ ಪ್ರಜೆಗಳು ಢಾಕಾದ ಟೇಕ್ಪಾಡಾ ಮತ್ತು ಉತ್ತರಾ ಎಂಬ ಬಡ ಪ್ರದೇಶಗಳ ಕಿರಿದಾದ ಗಲ್ಲಿಗಳು ಹಾಗೂ ಕೊಳಕು ರಸ್ತೆಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ, ಚೀನಾದ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ಸ್ಟ್ರೀಮ್ ಮಾಡುತ್ತಿದ್ದಾರೆ. ಈ ವೇಳೆ ಆ ಪ್ರದೇಶಗಳನ್ನು ನವದೆಹಲಿ ಎಂದು ಸುಳ್ಳು ಹೇಳಿ ಭಾರತದ ಇಮೇಜ್ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಲೈವ್ಸ್ಟ್ರೀಮ್ ಒಂದರಲ್ಲಿ ಚೀನಾದ ಮಹಿಳೆಯೊಬ್ಬಳು ಢಾಕಾದ ಕೊಳಚೆ ಪ್ರದೇಶ ತೋರಿಸಿ ಇದು ನವದೆಹಲಿ ಎಂದು ಜರೆದರೆ, ಮತ್ತೊಬ್ಬ ಚೀನಾ ಪ್ರಜೆ ಅಲ್ಲಿನ ಚಹಾ ಅಂಗಡಿ ತೋರಿಸಿ ಅತ್ಯಂತ ಅವಮಾನಕರ ಕಾಮೆಂಟ್ ಮಾಡಿದ್ದಾನೆ. ಇಂತಹ ವಿದೇಶಿ ಶಕ್ತಿಗಳ ವಿಕೃತ ಕೃತ್ಯಗಳು ಅವರ ವಿಶ್ವಾಸಾರ್ಹತೆಯನ್ನೇ ಕುಗ್ಗಿಸುತ್ತವೆ ಎಂದು ವಿದೇಶಾಂಗ ಇಲಾಖೆ ತಪರಾಕಿ ನೀಡಿದೆ.
ಇದೇ ವೇಳೆ, ಅಮೆರಿಕಾದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ದಾಖಲಿಸಿರುವ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಅಮೆರಿಕ ಕೋರ್ಟ್ ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿರುವುದಕ್ಕೂ ವಿದೇಶಾಂಗ ಸಚಿವಾಲಯ ಕಟು ಪ್ರತಿಕ್ರಿಯೆ ನೀಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು 'ರಾ' ಮಾಜಿ ಮುಖ್ಯಸ್ಥ ಸಾಮಂತ್ ಗೋಯಲ್ ಸೇರಿದಂತೆ ಭಾರತದ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೂಡಲಾಗಿರುವ ದಾವೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ನಮ್ಮ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ವಿದೇಶಿ ನೆಲದಲ್ಲಿ ಹೂಡಲಾಗಿರುವ ಇಂತಹ ದುರುದ್ದೇಶಪೂರಿತ ಹಾಗೂ ಆಧಾರರಹಿತ ಮೊಕದ್ದಮೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಯಾರನ್ನು ಉಗ್ರ ಎಂದು ಘೋಷಿಸಬೇಕು ಅಥವಾ ಯಾವ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಸಂಪೂರ್ಣ ಹಕ್ಕು ಭಾರತೀಯ ಕಾನೂನು ಮತ್ತು ಪ್ರಾಧಿಕಾರಕ್ಕೆ ಮಾತ್ರ ಇದೆ ಎಂದು ಎಂಇಎ ಖಡಕ್ ಆಗಿ ತಿಳಿಸಿದೆ.