ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಳೀಘಾಟ್ ನಿವಾಸದ ಹೊರಗೆ ತಡರಾತ್ರಿ ಟಿಎಂಸಿ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ತೀವ್ರ ಘರ್ಷಣೆ ನಡೆದಿದೆ. ಅಭಿಷೇಕ್ ಅವರ ಜನ್ಮದಿನದ ಅಂಗವಾಗಿ ನಿವಾಸದ ಮುಂಭಾಗ ಸಿದ್ಧತೆ ನಡೆಸುತ್ತಿದ್ದಾಗ ಆರಂಭವಾದ ವಾಗ್ವಾದವು ಕ್ಷಣಾರ್ಧದಲ್ಲಿ ಕಲ್ಲುತೂರಾಟ ಮತ್ತು ಹಿಂಸಾಚಾರಕ್ಕೆ ತಿರುಗಿತು.
ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಇಟ್ಟಿಗೆ ಮತ್ತು ಕಲ್ಲುಗಳಿಂದ ಹಿಂಸಾತ್ಮಕ ದಾಳಿ ನಡೆಸಿದ್ದು, ತಮ್ಮ ಬ್ಯಾನರ್-ಪೋಸ್ಟರ್ಗಳನ್ನು ಹರಿದು ಹಾಕಿದ್ದಾರೆ ಎಂದು ಅಭಿಷೇಕ್ ಆರೋಪಿಸಿದ್ದಾರೆ. ತಮ್ಮ ಬೆಂಬಲಿಗರಾದ ತಾಪಸ್ ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಒಬ್ಬರಿಗೆ ಪ್ಲಾಸ್ಟಿಕ್ ಸರ್ಜರಿ ಹಾಗೂ ಮತ್ತೊಬ್ಬರಿಗೆ ಮುಖದ ಮೂಳೆ ಮುರಿತಕ್ಕೊಳಗಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯ ನಂತರ ಮನೆ ಹೊರಬಂದ ಅಭಿಷೇಕ್ ಬ್ಯಾನರ್ಜಿ, ಪೊಲೀಸರ ಸಮ್ಮುಖದಲ್ಲೇ ಎದುರಾಳಿ ಕಾರ್ಯಕರ್ತರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ದಾಳಿಕೋರರು ರಿವಾಲ್ವರ್ ಹಿಡಿದು ಮುಂಚಿತವಾಗಿಯೇ ಸಂಚು ರೂಪಿಸಿ ಬಂದಿದ್ದರು ಎಂದು ಆರೋಪಿಸಿದ ಅವರು, ಇದನ್ನು "ತಮ್ಮನ್ನು ಕೊಲ್ಲಲು ನಡೆದ 7ನೇ ಯತ್ನ" ಎಂದು ಕರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ಸ್ಥಳದಲ್ಲಿ ಬಿಗಡಾಯಿಸಿರುವ ವಾತಾವರಣವನ್ನು ಶಮನಗೊಳಿಸಲು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.