image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಇ20 ಪೆಟ್ರೋಲ್ ಹೆಸರಿನಲ್ಲಿ '420' ಹಗರಣ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಇ20 ಪೆಟ್ರೋಲ್ ಹೆಸರಿನಲ್ಲಿ '420' ಹಗರಣ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ : ಪೆಟ್ರೋಲ್‌ನಲ್ಲಿ ಇಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, 'ಇ20' (E20) ಪೆಟ್ರೋಲ್ ಯೋಜನೆ ಈಗ ಸಾರ್ವಜನಿಕರ ಹಣ ಸುಲಿಗೆ ಮಾಡುವ '420' ಹಗರಣವಾಗಿ ಮಾರ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ 7 ಜಿಲ್ಲೆಗಳಿಂದ ಸಂಗ್ರಹಿಸಿದ 14 ಪೆಟ್ರೋಲ್ ಮಾದರಿಗಳನ್ನು ಎನ್‌ಎಬಿಎಲ್ (NABL) ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷಾ ವರದಿಯ ಪ್ರಕಾರ, ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20ರಷ್ಟು ಇಥೆನಾಲ್ ಮಿತಿಯನ್ನು ಮೀರಿ 11 ಮಾದರಿಗಳಲ್ಲಿ ಶೇಕಡಾ 31.2ರವರೆಗೆ ಇಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಇಂಡಿಯನ್ ಆಯಿಲ್ (IOCL) ಮಾದರಿಯಲ್ಲಿ ಶೇ 31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮಾದರಿಯಲ್ಲಿ ಶೇ 30.5 ರಷ್ಟು ಇಥೆನಾಲ್ ಇರುವುದು ದೃಢಪಟ್ಟಿದ್ದು, ಭಾರತ್ ಪೆಟ್ರೋಲಿಯಂ (BPCL), ನಾರಾಯಾ ಮತ್ತು ಶೆಲ್‌ನಂತಹ ಖಾಸಗಿ ಹಾಗೂ ಸಾರ್ವಜನಿಕ ತೈಲ ಕಂಪನಿಗಳ ಮಾದರಿಗಳಲ್ಲೂ ಮಿತಿಮೀರಿದ ಬೆರಕೆ ಕಂಡುಬಂದಿದೆ.

ಈ ಕುರಿತು ಕಳವಳ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ತೈಲ ಕಂಪನಿಗಳ ಆಂತರಿಕ ಪ್ರಯೋಗಾಲಯಗಳು ತಮ್ಮ ವರದಿಗಳಲ್ಲಿ ಇಥೆನಾಲ್ ಅಂಶದ ನಿಖರ ವಿವರಗಳನ್ನು ನಮೂದಿಸದೆ ಮುಚ್ಚಿಡುತ್ತಿವೆ ಎಂದು ಆರೋಪಿಸಿದ್ದಾರೆ. ಮಿತಿಮೀರಿದ ಇಥೆನಾಲ್ ಮಿಶ್ರಣದಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿಯಲಿದೆ, ಜೊತೆಗೆ ಎಂಜಿನ್ ಹಾಗೂ ಬಿಡಿಭಾಗಗಳು ಬೇಗನೆ ಹಾಳಾಗಲಿವೆ. ಗ್ರಾಹಕರು ದುಬಾರಿ ಬೆಲೆ ನೀಡಿ ಶುದ್ಧ ಪೆಟ್ರೋಲ್ ಖರೀದಿಸುತ್ತಿದ್ದರೂ, ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಗುಣಮಟ್ಟ ಹಾಗೂ ಇಥೆನಾಲ್ ಪ್ರಮಾಣದ ಬಗ್ಗೆ ಯಾವುದೇ ಮುಕ್ತ ಮಾಹಿತಿ ಲಭ್ಯವಿಲ್ಲದೆ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ದೇಶಾದ್ಯಂತ ವಿತರಿಸಲಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಜವಾಗಿ ಎಷ್ಟು ಶೇಕಡಾ ಇಥೆನಾಲ್ ಇದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕು, ಮಿತಿಮೀರಿದ ಇಥೆನಾಲ್ ಮಾರಾಟ ಮಾಡುತ್ತಿರುವ ತೈಲ ಕಂಪನಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಾನಿಗೊಳಗಾದ ವಾಹನ ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ