ಪಂಜಾಬ್ : ಪಂಜಾಬ್ನ ಪಟಿಯಾಲ ಜಿಲ್ಲೆಯ ರಾಜಪುರ ಸಮೀಪ ಶುಕ್ರವಾರ ಮಧ್ಯಾಹ್ನ ಚಲಿಸುತ್ತಿದ್ದ 'ಕರ್ಮಭೂಮಿ ಎಕ್ಸ್ಪ್ರೆಸ್' ರೈಲಿನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಹಾಗೂ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿತ್ತು. ಸರಾಯ್ ಬಂಜಾರ ರೈಲ್ವೆ ನಿಲ್ದಾಣ ಮತ್ತು ಗ್ರಾಮದ ಬಳಿ ರೈಲು ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ರೈಲಿನ ಸುಮಾರು ನಾಲ್ಕು ಬೋಗಿಗಳು ವ್ಯಾಪಿಸಿಕೊಂಡು, ದಟ್ಟ ಹೊಗೆ ಆವರಿಸಿಕೊಂಡಿತು. ರೈಲಿನ ಬೋಗಿಗಳಿಂದ ಭಾರೀ ಪ್ರಮಾಣದಲ್ಲಿ ಹೊಗೆ ಮತ್ತು ಜ್ವಾಲೆಗಳು ಹೊರಹೊಮ್ಮುತ್ತಿರುವುದನ್ನು ಕಂಡ ಚಾಲಕ ತಕ್ಷಣವೇ ರೈಲನ್ನು ಸ್ಥಗಿತಗೊಳಿಸಿದ್ದಾರೆ.
ರೈಲು ನಿಲ್ಲುತ್ತಿದ್ದಂತೆ ಸನ್ನಿವೇಶ ಜಾಗರೂಕರಾಗಿ ಗ್ರಹಿಸಿದ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ಬೋಗಿಗಳಿಂದ ಧಾವಂತದಿಂದ ಕೆಳಗಿಳಿದು ಓಡಿದರು. ಸ್ಥಳೀಯವಾಗಿ ಲಭ್ಯವಾಗಿರುವ ವಿಡಿಯೋಗಳಲ್ಲಿ ಪ್ರಯಾಣಿಕರು ಆತಂಕದ ಸ್ಥಿತಿಯಲ್ಲಿ ರೈಲಿನಿಂದ ದೂರ ನಿಂತಿರುವುದು ಹಾಗೂ ಹಳಿಗಳ ಪಕ್ಕದಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ, ರೈಲ್ವೆ ಪೊಲೀಸರು ಹಾಗೂ ತುರ್ತು ಪರಿಹಾರ ತಂಡಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡವು. ಈ ಘಟನೆಯಲ್ಲಿ ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗೊಂಡ ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ತಾಂತ್ರಿಕ ದೋಷ, ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಯಾವುದೇ ಕಾರಣಗಳ ಬಗ್ಗೆ ಎಲ್ಲಾ ಆಯಾಮಗಳಿಂದ ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.