image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯ ವಸ್ತುವಾಗಬಾರದು: ದತ್ತಾತ್ರೇಯ ಹೊಸಬಾಳೆ

ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯ ವಸ್ತುವಾಗಬಾರದು: ದತ್ತಾತ್ರೇಯ ಹೊಸಬಾಳೆ

ಮಧ್ಯಪ್ರದೇಶ : ಚುನಾವಣಾ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ವಿರೋಧಿಸುತ್ತಿರುವ ಶೈಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಕಾರ್ಯಸೂಚಿಯಂತೆ ಕೆಲಸ ಮಾಡುವ ಹಕ್ಕಿದೆ, ಆದರೆ ವಾಸ್ತವಾಂಶಗಳನ್ನು ಪರಿಶೀಲಿಸದೆ ಕೇವಲ ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಮೂರು ದಿನಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯಂತಹ ಪ್ರಮುಖ ಪ್ರಕ್ರಿಯೆಯನ್ನು ರಾಜಕೀಯ ವಿವಾದವನ್ನಾಗಿ ಮಾಡಬಾರದು ಎಂದು ಮನವಿ ಮಾಡಿದರು.

ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರುಗಳು ಮುಂದುವರಿದಿರುವುದು, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಒಂದೇ ವ್ಯಕ್ತಿಯ ಹೆಸರು ನೋಂದಣಿಯಾಗಿರುವುದು ಮುಂತಾದ ಅನೇಕ ತಾಂತ್ರಿಕ ಲೋಪಗಳಿವೆ ಎಂದು ಹೊಸಬಾಳೆ ಬೆಟ್ಟು ಮಾಡಿದರು. ದೇಶದ ಮತದಾರರ ಪಟ್ಟಿಯಲ್ಲಿರುವ ಸುಮಾರು 13 ಕೋಟಿ ಹೆಸರುಗಳ ಪೈಕಿ ದೊಡ್ಡ ಪ್ರಮಾಣದ ಹೆಸರುಗಳು ಮೃತಪಟ್ಟವರದ್ದಾಗಿವೆ ಹಾಗೂ ಇನ್ನು ಹಲವು ಹೆಸರುಗಳು ಎರಡು ಬೇರೆ ಬೇರೆ ಸ್ಥಳಗಳಲ್ಲಿ ನೋಂದಣಿಯಾಗಿವೆ. ಇಂತಹ ಅನಗತ್ಯ ದಾಖಲೆಗಳು ಮತದಾರರ ಪಟ್ಟಿಯನ್ನು ಕೃತಕವಾಗಿ ದೊಡ್ಡದಾಗಿಸುತ್ತವೆ.

ಈ ನಿಟ್ಟಿನಲ್ಲಿ ಮತದಾರರ ಪಟ್ಟಿಯಿಂದ ಅನರ್ಹ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಕಿ ಶುದ್ಧೀಕರಿಸುವುದು ತೀರಾ ಅಗತ್ಯವಾಗಿದೆ. ಅದರಲ್ಲೂ ಮುಖ್ಯವಾಗಿ, ಭಾರತೀಯ ನಾಗರಿಕರಲ್ಲದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ವಿಳಾಸ ಪಡೆದಿದ್ದರೆ, ಅದು ದೇಶದ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

Category
ಕರಾವಳಿ ತರಂಗಿಣಿ