ನವದೆಹಲಿ : ಭಾರತದ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ದೆಹಲಿ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಈ ಯೋಜನೆಯಿಂದ ಪ್ರಯಾಣದ ಸಮಯದಲ್ಲಿ ಭಾರಿ ಉಳಿತಾಯವಾಗಲಿದ್ದು, ತ್ವರಿತ ಸಾರಿಗೆ ಸಂಪರ್ಕಕ್ಕೆ ಹೈ-ಸ್ಪೀಡ್ ರೈಲು ಸೇತುವೆಯಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.
ಈ ಹೊಸ ಬುಲೆಟ್ ರೈಲು ದೆಹಲಿ, ಆಗ್ರಾ, ಕಾನ್ಪುರ, ಲಖನೌ, ಆಯೋಧ್ಯೆ, ಪ್ರಯಾಗರಾಜ್, ವಾರಣಸಿ ಹಾಗೂ ಬಿಹಾರದ ಪಾಟ್ನಾವನ್ನು ಸಂಪರ್ಕಿಸಲಿದೆ. ಮುಂಬರುವ ದಿನಗಳಲ್ಲಿ ಈ ಕಾರಿಡಾರ್ ಅನ್ನು ಪಶ್ಚಿಮ ಬಂಗಾಳದ ಸಿಲಿಗುರಿ ಹಾಗೂ ಅಸ್ಸಾಂನ ಗುವ್ಹಾಟಿಗೂ ವಿಸ್ತರಿಸಲಾಗುವುದು. ಈ ಯೋಜನೆಯಿಂದ ದೆಹಲಿಯಿಂದ ಆಗ್ರಾಗೆ ಕೇವಲ 59 ನಿಮಿಷ, ಕಾನ್ಪುರಕ್ಕೆ 1 ಗಂಟೆ 45 ನಿಮಿಷ ಹಾಗೂ ಉತ್ತರ ಪ್ರದೇಶದ ಲಖನೌಗೆ 2 ಗಂಟೆ 12 ನಿಮಿಷಗಳಲ್ಲಿ ತಲುಪಬಹುದಾಗಿದೆ. ಹಾಗೆಯೇ ಲಖನೌದಿಂದ ವಾರಣಸಿಗೆ ಕೇವಲ 21 ನಿಮಿಷ, ವಾರಣಸಿಯಿಂದ ಪ್ರಯಾಗರಾಜ್ಗೆ 33 ನಿಮಿಷ, ವಾರಣಸಿಯಿಂದ ಆಗ್ರಾಗೆ 2 ಗಂಟೆ 34 ನಿಮಿಷ, ವಾರಣಸಿಯಿಂದ ಪಾಟ್ನಾಗೆ 1 ಗಂಟೆ ಹಾಗೂ ದೆಹಲಿಯಿಂದ ಗುವ್ಹಾಟಿಗೆ ಸುಮಾರು 8 ಗಂಟೆ ಪ್ರಯಾಣದ ಅವಧಿ ಇರಲಿದೆ. ಈಶಾನ್ಯ ರಾಜ್ಯಗಳಿಗೆ ಬುಲೆಟ್ ರೈಲು ವಿಸ್ತರಿಸುವ ನಿರ್ಧಾರಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹರ್ಷ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದ್ದಾರೆ.
ಇದೇ ವೇಳೆ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದ ರೈಲ್ವೇ ಸಚಿವರು, ಬೆಂಗಳೂರಿನಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ವಿ. ಸೋಮಣ್ಣ, ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ರಾಜ್ಯ ಸಚಿವ ಕೃಷ್ಣಬೈರೇಗೌಡ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸ್ಲೀಪರ್ ರೈಲು ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಪುಣೆ ಮತ್ತು ಮುಂಬೈ ತಲುಪಲಿದ್ದು, ಪ್ರಹ್ಲಾದ್ ಜೋಶಿಯವರ ಸುದೀರ್ಘ ಬೇಡಿಕೆ ಈಡೇರಿದಂತಾಗಿದೆ. ಮುಂದುವರಿದು ಮಾತನಾಡಿದ ಸಚಿವರು, ಬೆಂಗಳೂರು-ಚೆನ್ನೈ ನಡುವೆ 73 ನಿಮಿಷಗಳಲ್ಲಿ ಹಾಗೂ ಹೈದರಾಬಾದ್ಗೆ 2 ಗಂಟೆ 10 ನಿಮಿಷಗಳಲ್ಲಿ ತಲುಪಿಸುವ ಹೈ-ಸ್ಪೀಡ್ ರೈಲು ಯೋಜನೆಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.