ನವದೆಹಲಿ: ಭಾರತವನ್ನು ಜಾಗತಿಕ ಹಡಗು ಕಂಟೈನರ್ ತಯಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಲು ಮತ್ತು ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು 10,000 ಕೋಟಿ ರೂಪಾಯಿ ವೆಚ್ಚದ 'ಕಂಟೈನರ್ ತಯಾರಿಕಾ ಪ್ರೋತ್ಸಾಹಕ ಯೋಜನೆ'ಗೆ (CMPS) ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಯೋಜನೆಯು 2027-28ರ ಹಣಕಾಸು ವರ್ಷದಿಂದ 2039-40ರವರೆಗೆ ಜಾರಿಯಲ್ಲಿರಲಿದೆ. ದೇಶದ ಪ್ರಸ್ತುತ ವರ್ಷದ 70,000 TEU ಕಂಟೈನರ್ ಉತ್ಪಾದನಾ ಸಾಮರ್ಥ್ಯವನ್ನು 7.5 ಲಕ್ಷ TEUಗೆ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಯೋಜನೆಯ ಭಾಗವಾಗಿ ಹೊಸ ಹಾಗೂ ವಿಸ್ತರಿತ ಕಂಟೈನರ್ ಘಟಕಗಳ ಸಾಲದ ಮೇಲೆ ಶೇಕಡಾ 3ರಷ್ಟು ವಾರ್ಷಿಕ ಬಡ್ಡಿ ರಿಯಾಯಿತಿಗಾಗಿ 859 ಕೋಟಿ ರೂಪಾಯಿ ಮತ್ತು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ತಯಾರಾಗುವ 20 ಅಡಿ ಕಂಟೈನರ್‌ಗೆ 49,500 ರೂ. ಹಾಗೂ 40 ಅಡಿ ಕಂಟೈನರ್‌ಗೆ 86,625 ರೂ. ಆರ್ಥಿಕ ನೆರವು ಸೇರಿದಂತೆ ಕಾರ್ಯಾಚರಣೆ ವೆಚ್ಚದ ಸಹಾಯಕ್ಕಾಗಿ 8,891 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಇದಲ್ಲದೆ, ಕಂಟೈನರ್ ಗುಣಮಟ್ಟ ಪರಿಶೀಲನೆಯ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ 150 ಕೋಟಿ ರೂಪಾಯಿ ನೀಡಲಾಗುತ್ತಿದ್ದು, ಪ್ರಮುಖ ಬಂದರುಗಳಲ್ಲಿ ಉತ್ಪಾದನಾ ಘಟಕಗಳಿಗೆ ಶೇಕಡಾ 25ರಷ್ಟು ರಿಯಾಯಿತಿ ದರದಲ್ಲಿ ಜಾಗ ಲಭ್ಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಧನ್ಯವಾದ ಅರ್ಪಿಸಿದ್ದು, ಈ ಯೋಜನೆಯು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಭಾರತೀಯ ಸಾರಿಗೆ ಮತ್ತು ಪೂರೈಕೆ ಸರಣಿಯನ್ನು ಸ್ವಾವಲಂಬಿಗೊಳಿಸಲಿದೆ ಎಂದು ತಿಳಿಸಿದ್ದಾರೆ. ಯೋಜನೆಯಿಂದ ದೇಶದಲ್ಲಿ ಸುಮಾರು 3,000 ನೇರ ಹಾಗೂ 50,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, 2039-40ರ ವೇಳೆಗೆ 75,000 ಕೋಟಿ ರೂಪಾಯಿಗಳ ಆರ್ಥಿಕ ಮೌಲ್ಯ ಉತ್ಪಾದನೆಯಾಗುವ ನಿರೀಕ್ಷೆಯಿದೆ.