ನಾಗ್ಪುರ :ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದರೂ, ಮಹಾರಾಷ್ಟ್ರದ ನಾಗ್ಪುರ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಆರ್‌ಎಸ್‌ಎಸ್‌ನ ಪ್ರಮುಖ ಕೇಂದ್ರ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ಕ್ಷೇತ್ರವಾದ ನಾಗ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ ಭರ್ಜರಿ ಜಯಗಳಿಸಿದ್ದಾರೆ.
ಅಭಿಜಿತ್ ವಂಜಾರಿ ಅವರಿಗೆ ಇದು ಸತತ ಎರಡನೇ ಗೆಲುವಾಗಿದೆ. 2020ರ ಚುನಾವಣೆಯಲ್ಲೂ ಗೆದ್ದಿದ್ದ ಅವರು, ಈ ಬಾರಿಯೂ ಪದವೀಧರ ಮತದಾರರ ವಿಶ್ವಾಸ ಗಳಿಸಿ ಬಿಜೆಪಿಗೆ ಭಾರಿ ಮುಖಭಂಗ ಉಂಟುಮಾಡಿದ್ದಾರೆ. ನಾಗ್ಪುರದ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ವಂಜಾರಿ, ಮಾಜಿ ಶಾಸಕ ಗೋವಿಂದರಾವ್ ವಂಜಾರಿ ಅವರ ಪುತ್ರರಾಗಿದ್ದಾರೆ. ಕಾನೂನು ಪದವೀಧರರಾಗಿರುವ ಅವರು, ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಬೆಳೆದ ನಾಯಕರಾಗಿದ್ದಾರೆ.
ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಅಭಿಜಿತ್ ವಂಜಾರಿ, ನಾಗ್ಪುರ ಇನ್ಮುಂದೆ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿಲ್ಲ, ಅದು ಕಾಂಗ್ರೆಸ್‌ನ ನೆಚ್ಚಿನ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ಯುವಕರು ಮತ್ತು ಪದವೀಧರರು ರಾಹುಲ್ ಗಾಂಧಿ ಅವರ ಕಾರ್ಯವೈಖರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಈ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.