ನವದೆಹಲಿ : ರಾಜ್ಯಗಳಲ್ಲಿ ನಡೆಸಲಾದ ಮತ್ತು ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಸರ್ವಾನುಮತದ ನಿರ್ಧಾರವಾಗಿದ್ದು, ಫಾರಂ 6 ರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ಪ್ರಕ್ರಿಯೆಯಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳನ್ನು ಚುನಾವಣಾ ಆಯೋಗ ಸಂಪೂರ್ಣವಾಗಿ ತಳ್ಳಿಹಾಕಿದೆ.
ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ್ ಯೆತುರು ಅವರು ಸಲ್ಲಿಸಿರುವ ಈ ಅಫಿಡವಿಟ್‌ನಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡ ಮೂವರ ಸಮಿತಿಯು ಒಟ್ಟಾಗಿ ಈ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿ ಮತ್ತು ಆಯೋಗದ ಕೆಲವು ನಿರ್ಧಾರಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಉತ್ತರಿಸುವ ವೇಳೆ ಆಯೋಗ ಈ ವಿವರಣೆ ನೀಡಿದೆ. ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಣೆಗಳ ನಡುವೆಯೂ ಸಿಇಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನಾಧರಿಸಿ ಹಲವು ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಈ ಕುರಿತು ಸ್ಪಷ್ಟನೆ ನೀಡಿರುವ ಆಯೋಗವು, 2025ರ ಜೂನ್ 24, 2025ರ ಅಕ್ಟೋಬರ್ 27 ಹಾಗೂ 2026ರ ಮೇ 14 ರಂದು ಹೊರಡಿಸಲಾದ ಎಸ್ಐಆರ್ ಸಂಬಂಧಿತ ಮೂರೂ ಆದೇಶಗಳು ಸಂಪೂರ್ಣವಾಗಿ ಸರ್ವಾನುಮತದಿಂದ ತಳೆದ ನಿರ್ಧಾರಗಳಾಗಿವೆ ಎಂದು ತಿಳಿಸಿದೆ. ಸಂವಿಧಾನದ ವಿಧಿ 324 ಮತ್ತು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರೆ ಚುನಾವಣಾ ಆಯುಕ್ತರ ಕಾಯ್ದೆ-2023 ರ ಸೆಕ್ಷನ್ 18 ರ ಪ್ರಕಾರವೇ ಈ ಕ್ರಮ ಕೈಗೊಳ್ಳಲಾಗಿದೆ. ಆಯೋಗದ ವಿರುದ್ಧದ ಇಂತಹ ಆರೋಪಗಳು ದುರದೃಷ್ಟಕರ ಎಂದಿರುವ ಚುನಾವಣಾ ಆಯೋಗ, ಕ್ಯಾಬಿನೆಟ್ ಕಾರ್ಯದರ್ಶಿಗಳ ನಡುವಿನ ಸಂವಹನವನ್ನು ಆಧರಿಸಿ ಮಾಡಲಾದ ಆರೋಪಗಳು ತಪ್ಪು ಕಲ್ಪನೆಯಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದೆ.