ನವದೆಹಲಿ : ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮತ ಉಳಿಸಿ-ದೇಶ ಉಳಿಸಿ’ ಎಂಬ ಘೋಷಣೆಯಡಿ ಬೃಹತ್ ರ್ಯಾಲಿ ನಡೆಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಮೈತ್ರಿಕೂಟ ನಿರ್ಧರಿಸಿದೆ. ಚುನಾವಣಾ ಅಕ್ರಮ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದರೆ ಈ ಪ್ರತಿಭಟನೆಯ ದಿನಾಂಕವೇ ಈಗ ತೀವ್ರ ರಾಜಕೀಯ ಕಾದಾಟಕ್ಕೆ ಕಾರಣವಾಗಿದೆ.
ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ನವೆಂಬರ್ 1 ಸಿಖ್ ಸಮುದಾಯದ ಮೇಲಾದ ಭೀಕರ ದಾಳಿಗಳ ಕಪ್ಪು ದಿನವಾಗಿದೆ. ಈ ದಿನದಂದೇ ರ್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಸಿಖ್ಖರ ಗಾಯಕ್ಕೆ ಉಪ್ಪು ಸವರಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 1984ರ ಅಕ್ಟೋಬರ್ 31 ರಂದು ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ನವೆಂಬರ್ 1 ರಿಂದ ಆರಂಭವಾದ ಸಿಖ್ ವಿರೋಧಿ ಹಿಂಸಾಚಾರದಲ್ಲಿ 3,325ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು, ಹಾಗೂ ಈ ಘಟನೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿತ್ತು ಎಂದು ನಾನಾವತಿ ಆಯೋಗ ಕೂಡ ವರದಿ ನೀಡಿತ್ತು.
ಇನ್ನೊಂದೆಡೆ, ದೀಪಾವಳಿ ಹಬ್ಬದ ವಹಿವಾಟಿಗೆ ಧಕ್ಕೆಯಾಗಲಿದೆ ಎಂದು ದೆಹಲಿಯ ವ್ಯಾಪಾರಿಗಳು ಕೂಡ ರ್ಯಾಲಿ ಮುಂದೂಡುವಂತೆ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ದಾಳಿಗೆ ಮುಂದಾಗಿದ್ದ ಕಾಂಗ್ರೆಸ್ಗೆ, ಬಿಜೆಪಿ 1984ರ ಕಹಿ ಇತಿಹಾಸವನ್ನು ಮುನ್ನೆಲೆಗೆ ತಂದು ಭಾರಿ ಮುಜುಗರ ಉಂಟುಮಾಡಿದೆ.