image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪ್ರಧಾನಿ ಮೋದಿ ಹತ್ಯೆಗೆ ಪ್ರಚೋದನೆ ಮತ್ತು ಜೈಶ್-ಎ-ಮೊಹಮ್ಮದ್ ನಂಟು: ಮುಂಬೈನಲ್ಲಿ ರ‍್ಯಾಪಿಡೋ ಚಾಲಕನ ಬಂಧನ

ಪ್ರಧಾನಿ ಮೋದಿ ಹತ್ಯೆಗೆ ಪ್ರಚೋದನೆ ಮತ್ತು ಜೈಶ್-ಎ-ಮೊಹಮ್ಮದ್ ನಂಟು: ಮುಂಬೈನಲ್ಲಿ ರ‍್ಯಾಪಿಡೋ ಚಾಲಕನ ಬಂಧನ

ಮುಂಬೈ : ಮಾಹಿಮ್‌ನಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಜೊತೆ ನಂಟು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ 33 ವರ್ಷದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಮುಂಬೈನ ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ಪಡೆಯಲಾಗಿದ್ದು, ರ‍್ಯಾಪಿಡೋ ಬೈಕ್ ಚಾಲಕ ಹಾಗೂ ಅತ್ತರ್ ಮಾರಾಟಗಾರನಾಗಿ ಗುರುತಿಸಿಕೊಂಡಿದ್ದ ಈತ ಹಗಲಿನಲ್ಲಿ ಸಾಮಾನ್ಯ ಕೆಲಸ ಮಾಡುತ್ತಲೇ ಒಳಗೊಳಗೇ ಯುವಕರನ್ನು ಉಗ್ರವಾದಕ್ಕೆ ಪ್ರಚೋದಿಸುತ್ತಿದ್ದ ಎನ್ನಲಾಗಿದೆ.

ಪಾಕಿಸ್ತಾನದ ಗುಪ್ತಚರ ಮತ್ತು ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆರೋಪಿ, ಟೆಲಿಗ್ರಾಂನಲ್ಲಿ ಪಾಕ್ ಬೆಂಬಲಿತ 'ಐಬಿಎನ್ ಇ ಖಾಸಿಮ್' ಚಾನೆಲ್‌ನ ಸಕ್ರಿಯ ಸದಸ್ಯನಾಗಿದ್ದ. ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಪ್ರಚೋದನಕಾರಿ ಆಡಿಯೋ ತುಣುಕುಗಳನ್ನು ಹಂಚಿಕೊಳ್ಳುವ ಮೂಲಕ ಧಾರ್ಮಿಕ ದ್ವೇಷ ಬಿತ್ತುವ ಕೃತ್ಯದಲ್ಲಿ ತೊಡಗಿದ್ದ. ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಗಳಲ್ಲಿ "ಅಬ್ ಜಿಹಾದ್ ಕಾ ಜಮಾನಾ ಆಗಯಾ ಹೈ" ಎಂದು ಶಸ್ತ್ರಾಸ್ತ್ರ ಹಿಡಿಯಲು ಪ್ರಚೋದಿಸಿದ್ದಲ್ಲದೆ, ಪ್ರಧಾನಿ ಮೋದಿಯವರ ಮುಂಬೈ ಭೇಟಿಯ ಭದ್ರತಾ ಲೋಪದ ಸುದ್ದಿಯ ಕೆಳಗೆ "ಇಂದಿರಾ ಗಾಂಧಿಗೆ ಮಾಡಿದ್ದನ್ನೇ ಪ್ರಧಾನಿ ಮೋದಿಗೂ ಮಾಡಬೇಕಿತ್ತು" ಎಂದು ಕಮೆಂಟ್ ಮಾಡುವ ಮೂಲಕ ಹತ್ಯೆಗೆ ಕರೆ ನೀಡಿದ್ದ.

ತನಿಖಾಧಿಕಾರಿಗಳು ಆರೋಪಿಯ ಮೊಬೈಲ್ ವಶಪಡಿಸಿಕೊಂಡು 39ಕ್ಕೂ ಹೆಚ್ಚು ಆಕ್ಷೇಪಾರ್ಹ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಸ್ಪಷ್ಟನೆ ನೀಡಿರುವ ರ‍್ಯಾಪಿಡೋ, ಅಕ್ಟೋಬರ್ 14ರಿಂದಲೇ ಆ ವ್ಯಕ್ತಿ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯಾಪ್ಟನ್ ಆಗಿ ಸಕ್ರಿಯವಾಗಿರಲಿಲ್ಲ ಎಂದು ತಿಳಿಸಿದೆ. ಜುಲೈನಲ್ಲಿ ಗುಜರಾತ್ ಎಟಿಎಸ್ ಭೇದಿಸಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಮಾಡ್ಯೂಲ್ ಜೊತೆ ಈತನಿಗೆ ಸಂಪರ್ಕವಿತ್ತೇ ಎಂಬ ಬಗ್ಗೆಯೂ ಸದ್ಯ ತನಿಖೆ ಮುಂದುವರಿದಿದೆ.

Category
ಕರಾವಳಿ ತರಂಗಿಣಿ