ನವದೆಹಲಿ: ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ತರುವ ನಿಟ್ಟಿನಲ್ಲಿ ಕೈಗೊಳ್ಳುವ ಪ್ರತಿಯೊಂದು ಅರ್ಥಪೂರ್ಣ ಪ್ರಯತ್ನಕ್ಕೂ ಭಾರತ ತನ್ನ ಬೆಂಬಲವನ್ನು ಮುಂದುವರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಮೂರು ದಿನಗಳ ಭಾರತ ಭೇಟಿಗಾಗಿ ಆಗಮಿಸಿರುವ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಉಭಯ ನಾಯಕರ ನಡುವಿನ ಮಾತುಕತೆಯು ಭಾರತ ಮತ್ತು ಪೋಲೆಂಡ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವತ್ತ ಕೇಂದ್ರೀಕರಿಸಿತ್ತು. ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಸಹಯೋಗವನ್ನು ಗಟ್ಟಿಗೊಳಿಸಲು ಒಮ್ಮತಕ್ಕೆ ಬರಲಾಗಿದ್ದು, ಈ ಪ್ರಮುಖ ವಲಯಗಳಲ್ಲಿ ಜಂಟಿ ಅಭಿವೃದ್ಧಿ ಹಾಗೂ ಉತ್ಪಾದನೆಗಾಗಿ ಪೋಲೆಂಡ್ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆೆಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಭಾರತ ಮತ್ತು ಪೋಲೆಂಡ್ ಆರ್ಥಿಕ ಹಾಗೂ ತಾಂತ್ರಿಕ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವು ಎರಡೂ ದೇಶಗಳ ಆರ್ಥಿಕ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಕಾನೂನಿನ ಆಡಳಿತಕ್ಕೆ ಪರಸ್ಪರ ಬದ್ಧತೆ ವ್ಯಕ್ತಪಡಿಸಿರುವ ನಾಯಕರು, ಜಾಗತಿಕ ಆಡಳಿತ ಸಂಸ್ಥೆಗಳಲ್ಲಿ ಅಗತ್ಯ ಸುಧಾರಣೆಗಳಾಗಬೇಕು ಎಂದು ಪ್ರತಿಪಾದಿಸಿದರು.