ನವದೆಹಲಿ : ಅಮೆರಿಕದ ಪ್ರಸಿದ್ಧ ಗಾಯಕಿ ಹಾಗೂ ಆಫ್ರಿಕನ್-ಅಮೆರಿಕನ್ ನಟಿ ಮೇರಿ ಮಿಲ್ಬೆನ್ ಅವರು ಭಾರತದ ರಾಜಕೀಯ ಬೆಳವಣಿಗೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದಲ್ಲಿರುವ ಮೋದಿ ವಿರೋಧಿಗಳು 'ಕಾಕ್ರೋಚ್ ಜನತಾ ಪಾರ್ಟಿ' (CJP) ಹಾಗೂ ಅದರ ಮುಖಂಡ ಅಭಿಜೀತ್ ದಿಪ್ಕೆ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೇರಿ ಮಿಲ್ಬೆನ್, ಇದು ಮೌನವಾಗಿ ಕುಳಿತುಕೊಳ್ಳುವ ಸಮಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಯುವ ದೇಶಭಕ್ತರು ಎದ್ದು ನಿಂತು, ಸಿಜೆಪಿ ಪಕ್ಷದ ವಿನಾಶಕಾರಿ ಹಾಗೂ ಅರಾಜಕತಾಪರ ಮನಸ್ಥಿತಿಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದಾರೆ. ಸತತ ಮೂರು ಅವಧಿಗಳಿಗೆ ಪ್ರಧಾನಿಯಾಗಿ, ಒಟ್ಟು 25 ವರ್ಷಗಳಿಂದ ದೇಶದ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿರುವ ಇಂತಹ ವಿನಾಶಕಾರಿ ಶಕ್ತಿಗಳಿಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಶ್ವದಾದ್ಯಂತ ಸಂಪ್ರದಾಯವಾದಿ ನಾಯಕರು ಹಾಗೂ ಆಡಳಿತವನ್ನು ಗುರಿಯಾಗಿಸಲು ಒಂದು ನಿರ್ದಿಷ್ಟ ಜಾಗತಿಕ ಮಾದರಿ ಕೆಲಸ ಮಾಡುತ್ತಿದೆ ಎಂದು ಮಿಲ್ಬೆನ್ ವಿಶ್ಲೇಷಿಸಿದ್ದಾರೆ. ಆಯಾ ದೇಶಗಳಲ್ಲಿ ಅಮೆರಿಕದ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ತೀವ್ರಗಾಮಿ ಚಿಂತನೆಗಳಿಗೆ ಪ್ರೇರೇಪಿಸಿ, ಸ್ವದೇಶದಲ್ಲಿ ಅರಾಜಕತೆ ಹಾಗೂ ಅಸ್ಥಿರತೆ ಸೃಷ್ಟಿಸಲು ಧನಸಹಾಯ ಮಾಡಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಇಂತಹ ಪ್ರಯತ್ನಗಳು ದೇಶದ ಪ್ರಗತಿ ಹಾಗೂ ಆಡಳಿತದ ಮೇಲೆ ಪ್ರಭಾವ ಬೀರಲು ಯತ್ನಿಸಿದರೂ, ಅಂತಿಮವಾಗಿ ಯಶಸ್ವಿಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಭಾರತದ ಮಣ್ಣಿನಲ್ಲಿ ಹುಟ್ಟಿ ಬೆಳೆದ ಹೊಸ ಧ್ವನಿಗಳು ಎದ್ದು ನಿಲ್ಲಬೇಕಿದೆ ಎಂದಿದ್ದಾರೆ.
ಮೇರಿ ಮಿಲ್ಬೆನ್ ಅವರ ಈ ಆರೋಪಗಳಿಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮದೇ ದೇಶದವರನ್ನು ಅಪಪ್ರಚಾರ ಮಾಡಲು ಅಮೆರಿಕದವರ ಬೆಂಬಲವನ್ನುೇಕೆ ಕೋರುತ್ತಿದ್ದಾರೆ ಮತ್ತು ವಿದೇಶಿ ಪ್ರಜೆಗಳಿಗೆ ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಯಾರು ಹಕ್ಕು ನೀಡಿದರು ಎಂದು ಅವರು ಪ್ರಶ್ನಿಸಿದ್ದಾರೆ. ಭಾರತದ ಸಮಸ್ಯೆಗಳನ್ನು ಪರಿಹರಿಸಲು ನಾವೇ ಸಮರ್ಥರಾಗಿದ್ದೇವೆ ಹೊರತು ಹೊರಗಿನವರ ಹಸ್ತಕ್ಷೇಪ ನಮಗೆ ಅಗತ್ಯವಿಲ್ಲ ಎಂದು ದಿಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಮರುಉತ್ತರ ನೀಡಿರುವ ಮೇರಿ ಮಿಲ್ಬೆನ್, ಪ್ರಧಾನಿ ಮೋದಿ ಅವರಿಗೆ ಯಾವುದೇ ಅಮೆರಿಕದ ಬೆಂಬಲದ ಅಗತ್ಯವಿಲ್ಲ, ಬದಲಿಗೆ ಭಾರತದ ಕೋಟ್ಯಂತರ ನಾಗರಿಕರ ಬೆಂಬಲ ಅವರೊಂದಿಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಅಮೆರಿಕದ ದಾನಿಗಳು ತಮ್ಮ ಉದ್ದೇಶ ಈಡೇರದಿದ್ದಾಗ ಇಂತಹವರನ್ನು ಕೈಬಿಡುತ್ತಾರೆ ಎಂದು ಎಚ್ಚರಿಕೆ ನೀಡಿರುವ ಅವರು, ಸಿಜೆಪಿ ನಾಯಕರು ತಮ್ಮ ವಿದೇಶಿ ಶಿಕ್ಷಣ ಮತ್ತು ಪ್ರತಿಭೆಯನ್ನು ಸಕಾರಾತ್ಮಕ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಆಫ್ರಿಕನ್-ಅಮೆರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿಯಾಗಿರುವ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ 'ಜನ ಗಣ ಮನ' ಹಾಗೂ 'ಓಂ ಜೈ ಜಗದೀಶ ಹರೇ' ಭಕ್ತಿಗೀತೆಯನ್ನು ಹಾಡುವ ಮೂಲಕ ಭಾರತೀಯರ ಮನಗೆದ್ದಿದ್ದಾರೆ. ವಿಶೇಷವಾಗಿ 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಅವರು ರಾಷ್ಟ್ರಗೀತೆ ಹಾಡಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ಭಾರತದ ರಾಜಕೀಯ ಮತ್ತು ನಾಯಕತ್ವದ ಬಗ್ಗೆ ಅವರು ಆಗಾಗ ತಮ್ಮ ಬಹಿರಂಗ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.