ಮಹಾರಾಷ್ಟ್ರ : ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಮಹಾರಾಷ್ಟ್ರದ ರೈತರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸಿಹಿಸುದ್ದಿ ಸಿಕ್ಕಿದೆ. ತೀವ್ರ ಬರ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ರಾಜ್ಯದ ರೈತರಿಗೆ ₹5,000 ದೀಪಾವಳಿ ಬೋನಸ್ ಘೋಷಿಸಿದ್ದಾರೆ. ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಬ್ಬದ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಲು ಅನುಕೂಲವಾಗುವಂತೆ ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದೆ 265 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದ್ದು, ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಒಟ್ಟು 305 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ವಿಸ್ತರಿಸಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಡಿಸೆಂಬರ್ ವೇಳೆಗೆ ತಲುಪುತ್ತಿದ್ದ ಪರಿಹಾರ ಧನವನ್ನು, ಈ ಬಾರಿ ರೈತರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬಕ್ಕೂ ಮುನ್ನವೇ ತ್ವರಿತಗತಿಯಲ್ಲಿ ತಲುಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.