ನವದೆಹಲಿ : ದೆಹಲಿಯಲ್ಲಿ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು, ಹೋರಾಟಗಾರರು, ವಕೀಲರು ಮತ್ತು ಪತ್ರಕರ್ತರನ್ನು ಸಾಮೂಹಿಕವಾಗಿ ವಶಕ್ಕೆ ಪಡೆದ ಕ್ರಮವನ್ನು ಟೀಕಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ವಿಶ್ವಸಂಸ್ಥೆಯ ಈ ನಿಲುವು ಅತಿಯಾದ ಪಕ್ಷಪಾತ ಹಾಗೂ ದೇಶದ ಆಂತರಿಕ ವಿಚಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಲವಾಗಿ ಆಕ್ಷೇಪಿಸಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಸಂವಿಧಾನವೇ ಖಾತರಿಪಡಿಸಿದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಜಾರಿ ಸಂಸ್ಥೆಗಳು ಕಾನೂನಿನ ಚೌಕಟ್ಟಿನಲ್ಲೇ ಕರ್ತವ್ಯ ನಿರ್ವಹಿಸಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ನೆರೆಹೊರೆಯ ರಾಷ್ಟ್ರಗಳಲ್ಲಿ ನಡೆದ ಪ್ರತಿಭಟನೆಗಳ ಮೇಲಿನ ದಮನದ ಬಗ್ಗೆಯಾಗಲಿ ಅಥವಾ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಸಮೀಪ ನಡೆದ ಕ್ರಮಗಳ ಬಗ್ಗೆಯಾಗಲಿ ಆಯೋಗ ಮೌನ ವಹಿಸಿರುವುದನ್ನು ಖಂಡಿಸಿರುವ ಭಾರತ, ಇಂತಹ ಇಬ್ಬಗೆಯ ನೀತಿಗಳು ಜಾಗತಿಕ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತವೆ ಎಂದು ಕಿಡಿಕಾರಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ದೆಹಲಿ ಪೊಲೀಸರು ಅನುಮತಿ ನಿರಾಕರಿಸಿ ಬಿಗಿ ಭದ್ರತೆ ನಡುವೆ ಪ್ರತಿಭಟನಾಕಾರರು ಹಾಗೂ ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಅರವಿಂದ್ ಕೇಜ್ರಿವಾಲ್ ಮತ್ತು ಮಾಣಿಕ್ ಸರ್ಕಾರ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್ನಿಂದ ಮೆರವಣಿಗೆ ಹೊರಟಿದ್ದ ವಕೀಲರನ್ನೂ ವಶಕ್ಕೆ ಪಡೆಯಲಾಗಿದ್ದು, ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮಧ್ಯಸ್ಥಿಕೆಯ ನಂತರ ಅವರನ್ನು ಬಿಡುಗಡೆಗೊಳಿಸಲಾಗಿತ್ತು.