ಶಿಮ್ಲಾ: 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ನಾಯಕತ್ವ ವಹಿಸಿ ಚಿನ್ನದ ಪದಕ ತಂದುಕೊಟ್ಟಿದ್ದ ಅರ್ಜುನ್ ಪ್ರಶಸ್ತಿ ವಿಜೇತೆ, ಹಿಮಾಚಲ ಪ್ರದೇಶ ಮೂಲದ ರಿತು ನೇಗಿ ಅವರನ್ನು ರಾಜ್ಯ ಸರ್ಕಾರದ 1 ಕೋಟಿ ರೂ. ನಗದು ಬಹುಮಾನದ ಪಟ್ಟಿಯಿಂದ ಕೈಬಿಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸಿರ್ಮೂರ್ ಜಿಲ್ಲೆಯ ಶಿಲೈ ಮೂಲದವರಾದ ರಿತು ನೇಗಿ, ಹರಿಯಾಣದ ಪಾನಿಪತ್‌ಗೆ ವಿವಾಹವಾಗಿ ಹೋಗಿದ್ದಾರೆ ಎಂಬ ಕಾರಣಕ್ಕೆ ಅವರ ತವರು ರಾಜ್ಯದ ಗುರುತನ್ನು ಕಡೆಗಣಿಸಲಾಗಿದೆ. ಸತತ ಮೂರು ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿರುವ ಹಿರಿಯ ಕ್ರೀಡಾಪಟುವಿಗೆ ಈ ರೀತಿ ನಡೆದುಕೊಂಡಿರುವುದು ತೀವ್ರ ಬೇಸರ ತಂದಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಒಂದು ವಾರದ ಹಿಂದೆ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದರೂ, ದಿಢೀರನೆ ತಮ್ಮ ಹೆಸರನ್ನು ಪಟ್ಟಿಯಿಂದ ಹೊರಗಿಟ್ಟಿರುವುದರ ಹಿಂದಿನ ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ. ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಯಾದವಂದ್ರೀ ಗೋಮಾ, ಸರ್ಕಾರದ ನಿರ್ಧಾರದ ಕಡತವನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.