ನವದೆಹಲಿ : ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕರೆನ್ಸಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮಹತ್ವದ ಮತ್ತು ಕಠಿಣ ಕ್ರಮಗಳನ್ನು ಘೋಷಿಸಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 96.73 ಕ್ಕೆ ಮುಕ್ತಾಯಗೊಂಡಿದ್ದು, ಇದು ಕಳೆದ ಮೇ ತಿಂಗಳಲ್ಲಿ ದಾಖಲಾಗಿದ್ದ 96.96 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಅತ್ಯಂತ ಹತ್ತಿರದಲ್ಲಿದೆ.
ಡಾಲರ್ ಬೇಡಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಎಂಬ ಮೂರು ಪ್ರಮುಖ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ತನ್ನ ವಿದೇಶಿ ವಿನಿಮಯ ಸಂಗ್ರಹದಿಂದ ನೇರವಾಗಿ ಡಾಲರ್ ಒದಗಿಸಲು ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಡಾಲರ್‌ಗೆ ಇರlುವ ವಿಪರೀತ ಬೇಡಿಕೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತೊಂದೆಡೆ, ಕರೆನ್ಸಿ ಮಾರುಕಟ್ಟೆಯಲ್ಲಿ ಊಹಾಪೋಹದ ವ್ಯಾಪಾರವನ್ನು ಹಾಗೂ ಕೃತಕ ಏರಿಳಿತಗಳನ್ನು ತಡೆಯಲು ಆರ್‌ಬಿಐ ವಿನಿಮಯ-ವಹಿವಾಟು ಉತ್ಪನ್ನಗಳ ಮೌಲ್ಯ ಮಿತಿಯನ್ನು 100 ಮಿಲಿಯನ್ ಡಾಲರ್‌ಗಳಿಂದ 5 ಮಿಲಿಯನ್ ಡಾಲರ್‌ಗಳಿಗೆ ಅಂದರೆ ಶೇ 95ರಷ್ಟು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಅಲ್ಲದೆ, ವಿದೇಶಿ ವಿನಿಮಯ ವಿತರಕರು ರದ್ದಾದ ಒಪ್ಪಂದಗಳನ್ನು ಮರುಬುಕ್ ಮಾಡುವುದರ ಮೇಲೆ ನಿರ್ಬಂಧ ವಿಧಿಸಿದ್ದು, ಅರ್ಹ ವಹಿವಾಟುಗಳಿಗೆ ಶೇ 20ರಷ್ಟು ವಿದೇಶಿ ವಿನಿಮಯ ಅಪಾಯದ ಮೀಸಲು ಕಡ್ಡಾಯಗೊಳಿಸಲಾಗಿದೆ. ಆರ್‌ಬಿಐನ ಈ ದಿಟ್ಟ ಹೆಜ್ಜೆಗಳಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ರೂಪಾಯಿಗೆ ತಕ್ಷಣದ ಬೆಂಬಲ ಸಿಗುವ ವಿಶ್ವಾಸ ವ್ಯಕ್ತವಾಗಿದೆ.