ನವದೆಹಲಿ : ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಿರುವ ಬೆನ್ನಲ್ಲೇ, 42 ಮಂದಿ ಮಾಜಿ ನ್ಯಾಯಾಧೀಶರು ಹಾಗೂ ಸಾಂವಿಧಾನಿಕ ಹುದ್ದೆಗಳ ನಿವೃತ್ತ ಹಿರಿಯ ಅಧಿಕಾರಿಗಳು ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ಬೆಂಬಲಕ್ಕೆ ನಿಂತಿದ್ದಾರೆ. ಅಕ್ಟೋಬರ್ 7 ರಂದು ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ, ದೇಶದ ಸಾಂವಿಧಾನಿಕ ಸಂಸ್ಥೆಗಳು ಹಾಗೂ ನ್ಯಾಯಾಂಗದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಗಳನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕಾಗಿದ್ದರೂ, ಅವುಗಳ ಗೌರವಕ್ಕೆ ಕುಂದು ತರುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸಾಂವಿಧಾನಿಕ ಅಧಿಕಾರಿಗಳನ್ನು 'ಕಳ್ಳರು', 'ಗೊಂಬೆಗಳು' ಹಾಗೂ 'ರಾಜಿ ಮಾಡಿಕೊಂಡವರು' ಎಂದು ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. 'ಮತ ಕಳ್ಳತನ'ದಂತಹ ಗಂಭೀರ ಆರೋಪಗಳನ್ನು ಕೇವಲ ಪತ್ರಿಕಾಗೋಷ್ಠಿಗಳಿಗೆ ಸೀಮಿತಗೊಳಿಸದೆ, ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಗಳ ಮುಂದೆ ಏಕೆ ಸಾಬೀತುಪಡಿಸುತ್ತಿಲ್ಲ ಎಂದು ಮಾಜಿ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವು ಪ್ರಮಾಣಪತ್ರ ಸಲ್ಲಿಸಲು ಕೋರಿದಾಗ ಯಾರೂ ಅದನ್ನು ನೀಡದಿರುವುದು ಮತ್ತು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂ ಹಾಗೂ ಚುನಾವಣಾ ವ್ಯವಸ್ಥೆಯ ಬಗ್ಗೆ ಪದೇ ಪದೇ ಅಪಸ್ವರ ಎತ್ತುವುದನ್ನು ಅವರು ಆಕ್ಷೇಪಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಚುನಾವಣಾ ಪಟ್ಟಿಯನ್ನು ನಿಯಂತ್ರಿಸುವ ಕಾನೂನು ಚೌಕಟ್ಟಿನ ಭಾಗವಾಗಿದೆ. 1950ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 21(3) ರಡಿಯಲ್ಲಿ ಆಯೋಗಕ್ಕೆ ಈ ಅಧಿಕಾರವಿದ್ದು, ಮೃತ ಮತದಾರರ ಹೆಸರುಗಳು, ನಕಲಿ ನಮೂದುಗಳನ್ನು ತೆಗೆದುಹಾಕಿ ಅರ್ಹ ನಾಗರಿಕರನ್ನು ಸೇರ್ಪಡೆಗೊಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಸುಪ್ರೀಂ ಕೋರ್ಟ್ ಕೂಡ ಈ ಪ್ರಕ್ರಿಯೆಯು ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿದ್ದು, ಅಗತ್ಯ ಭದ್ರತಾ ಕ್ರಮಗಳೊಂದಿಗೆ ಆಯೋಗವು ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತಿದೆ ಎಂದು ಸಹಿದಾರರು ಉಲ್ಲೇಖಿಸಿದ್ದಾರೆ.
ಪ್ರಜಾಪ್ರಭುತ್ವದ ಅತಿ ದೊಡ್ಡ ಆಸ್ತಿಯಾಗಿರುವ ಜನಸಾಮಾನ್ಯರ ನಂಬಿಕೆಯನ್ನು ಸುಳ್ಳು ನಿರೂಪಣೆಗಳ ಮೂಲಕ ಕುಗ್ಗಿಸಿದರೆ, ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸವೇ ಹೊರಟುಹೋಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ಮತದಾನದ ಮೇಲಿನ ನಂಬಿಕೆ ಕಳೆದುಕೊಂಡಾಗ ಸಮಾಜದಲ್ಲಿ ಅಶಾಂತಿ ಮತ್ತು ಅರಾಜಕ ಶಕ್ತಿಗಳು ಗೊಂದಲವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ರಾಜಕೀಯ ಪಕ್ಷಗಳು ಸಾಕ್ಷ್ಯಾಧಾರಗಳ ಸಮೇತ ತಮ್ಮ ಅಹವಾಲುಗಳನ್ನು ಆಯೋಗ ಮತ್ತು ನ್ಯಾಯಾಲಯದ ಮುಂದೆ ಇಡಬೇಕೇ ಹೊರತು ವ್ಯವಸ್ಥೆಯನ್ನು ದುರ್ಬಲಗೊಳಿಸಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ. ಜೊತೆಗೆ, ಯಾವುದೇ ಅಧಿಕೃತ ಪರಿಶೀಲನೆ ಇಲ್ಲದ ಆರೋಪಗಳಿಗೆ ಮಾಧ್ಯಮಗಳು ದೊಡ್ಡ ಪ್ರಚಾರ ನೀಡಬಾರದು, ಏಕೆಂದರೆ ಆಕರ್ಷಕ ಹೆಡ್‌ಲೈನ್‌ಗಳು ಎಂದಿಗೂ ಸಾಕ್ಷಿಯಾಗಲಾರವು ಎಂದು ಸ್ಪಷ್ಟಪಡಿಸಿದ್ದಾರೆ.