image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪತ್ರಿಕಾ ವರದಿಗಳ ಆಧಾರದ ಮೇಲೆ ಸಿಇಸಿ ವಿರುದ್ಧ ಕ್ರಮ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಪತ್ರಿಕಾ ವರದಿಗಳ ಆಧಾರದ ಮೇಲೆ ಸಿಇಸಿ ವಿರುದ್ಧ ಕ್ರಮ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ರಾಜಕೀಯ ವೇದಿಕೆಗಳಲ್ಲಿ ಕೇಳಿಬರುವ ಆರೋಪಗಳು ಹಾಗೂ ಪತ್ರಿಕಾ ವರದಿಗಳಿಗಿಂತ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳೇ ನಿರ್ಣಾಯಕ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಭಾರತೀಯ ಚುನಾವಣಾ ಆಯೋಗ (ECI) ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಕೇವಲ ಮಾಧ್ಯಮ ವರದಿಗಳನ್ನು ಮುಂದಿಟ್ಟುಕೊಂಡು ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ತುರ್ತು ತಡೆ ಅಥವಾ ಅಮಾನತಿನಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದೆ.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಇತರ ಆಯುಕ್ತರನ್ನು ಪರಿಗಣಿಸದೆ ಸಿಇಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿಯನ್ನಾಧರಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ನಡೆಸಿತು. ವಿಚಾರಣೆ ವೇಳೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ, ಯಾವುದೇ ಮಧ್ಯಂತರ ತಡೆ ನೀಡಲು ನಿರಾಕರಿಸಿತು.

ಪತ್ರಿಕಾ ವರದಿಗಳು ಸಂಪೂರ್ಣ ನಿಜವಾಗಿರಬಹುದು, ಭಾಗಶಃ ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು; ಆದರೆ ಕೇವಲ ಊಹೆಗಳ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ಸಾಂವಿಧಾನಿಕ ಸಂಸ್ಥೆಗೆ ತನ್ನ ದಾಖಲೆಗಳು ಮತ್ತು ವಿವರಣೆ ಮಂಡಿಸಲು ಸಮಂಜಸ ಅವಕಾಶ ನೀಡುವುದು ಕಡ್ಡಾಯ ಎಂದ ಪೀಠ, ಆಂತರಿಕ ಭಿನ್ನಾಭಿಪ್ರಾಯಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಭಾಗವೇ ಹೊರತು ಸಂಸ್ಥೆಯ ವಿಘಟನೆಯಲ್ಲ ಎಂದು ಅಭಿಪ್ರಾಯಪಟ್ಟಿದೆ. 'ಫಾರ್ಮ್-6' ಬಳಕೆ ಹಾಗೂ ಆಯೋಗದ ಪತ್ರಿಕಾ ಪ್ರಕಟಣೆ ಕುರಿತಾದ ವಿವಾದಗಳಿಗೂ ಕಾನೂನಾತ್ಮಕ ಸ್ಪಷ್ಟತೆ ನೀಡಿದ ನ್ಯಾಯಾಲಯ, ಆಯೋಗದಲ್ಲಿ ಅಗತ್ಯ ಬಹುಮತವಿಲ್ಲದೆ ನಿರ್ಧಾರಗಳಾಗಿರುವುದು ಮುಂದೆ ಸಾಬೀತಾದರೆ ಅವುಗಳನ್ನು ರದ್ದುಪಡಿಸುವ ಅಧಿಕಾರ ನ್ಯಾಯಾಲಯಕ್ಕಿದೆ ಎಂದು ತಿಳಿಸಿದೆ.

Category
ಕರಾವಳಿ ತರಂಗಿಣಿ