image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಯಾವುದೇ ಭದ್ರತಾ ಸವಾಲು ಎದುರಿಸಲು ವಾಯುಪಡೆ ಸನ್ನದ್ಧ: ಏರ್‌ ಚೀಫ್‌ ಮಾರ್ಷಲ್‌ ಎ.ಪಿ. ಸಿಂಗ್‌

ಯಾವುದೇ ಭದ್ರತಾ ಸವಾಲು ಎದುರಿಸಲು ವಾಯುಪಡೆ ಸನ್ನದ್ಧ: ಏರ್‌ ಚೀಫ್‌ ಮಾರ್ಷಲ್‌ ಎ.ಪಿ. ಸಿಂಗ್‌

ನವದೆಹಲಿ : ದೇಶ ಎದುರಿಸುವ ಯಾವುದೇ ಭದ್ರತಾ ಸವಾಲನ್ನು ನಿಭಾಯಿಸಲು ಭಾರತೀಯ ವಾಯುಪಡೆ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಎ.ಪಿ. ಸಿಂಗ್‌ ಭರವಸೆ ನೀಡಿದ್ದಾರೆ. ಹಿಂಡನ್‌ ವಾಯುನೆಲೆಯಲ್ಲಿ ನಡೆದ 94ನೇ ವಾಯುಪಡೆ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ವಾಯುಪಡೆಯ ಕಾರ್ಯಾಚರಣಾ ಸಾಮರ್ಥ್ಯಗಳು ಸರಿಯಾದ ದಿಕ್ಕಿನಲ್ಲಿ ವೃದ್ಧಿಸುತ್ತಿದ್ದು, ಯಾವುದೇ ಸವಾಲುಗಳನ್ನು ಎದುರಿಸಲು ಪಡೆ ಸನ್ನದ್ಧ ಹಾಗೂ ಜಾಗರೂಕವಾಗಿದೆ ಎಂದು ಹೇಳಿದರು.

ಕಳೆದ 94 ವರ್ಷಗಳಲ್ಲಿ ಭಾರತೀಯ ವಾಯುಪಡೆಯು ವಿಶ್ವದ ಅತ್ಯುತ್ತಮ ಪಡೆಗಳಲ್ಲಿ ಒಂದಾಗಿ ಬೆಳೆದಿದೆ. ಅಸಾಧಾರಣ, ಸಮರ್ಥ, ನೆಟ್‌ವರ್ಕ್‌-ಕೇಂದ್ರಿತ ಹಾಗೂ ಬಹು-ವಲಯ ಸಾಮರ್ಥ್ಯ ಹೊಂದಿರುವ ಪಡೆಯಾಗಿ ವಾಯುಪಡೆ ರೂಪುಗೊಂಡಿದೆ ಎಂದು ವಿವರಿಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವಾಯುಪಡೆಯ ಯೋಧರಿಗೆ ಗೌರವ ನಮನ ಸಲ್ಲಿಸಿದ ಅವರು, ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಾಯುಶಕ್ತಿಯೇ ಪ್ರಮುಖ ಸಾಧನ ಎಂಬುದನ್ನು ಸಾಬೀತುಪಡಿಸಿವೆ ಎಂದರು.

ವಿಶೇಷವಾಗಿ 'ಆಪರೇಷನ್‌ ಸಿಂದೂರ್‌' ಕುರಿತು ಮಾತನಾಡಿದ ಅವರು, ಈ ಕಾರ್ಯಾಚರಣೆಯಲ್ಲಿ ವಾಯುಪಡೆಯು ತನ್ನ ತ್ವರಿತ ಯುದ್ಧ ಕಾರ್ಯಾಚರಣೆಯ ಸಾಮರ್ಥ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿದೆ ಎಂದು ತಿಳಿಸಿದರು. ರಾಷ್ಟ್ರದ ನಿರೀಕ್ಷೆಗಳನ್ನು ಪೂರೈಸಲು ಹಾಗೂ ಅವುಗಳನ್ನು ಮೀರಿ ಸಾಧಿಸಲು ವಾಯುಪಡೆಯು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ ಎಂದು ಆಶ್ವಾಸನೆ ನೀಡಿದರು. ಅಲ್ಲದೆ, ಅಕ್ಟೋಬರ್‌ 31ರಂದು ತಾವು ನಿವೃತ್ತಿಯಾಗಲಿರುವ ಕುರಿತು ಉಲ್ಲೇಖಿಸಿದ ಅವರು, ವಾಯುಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವುದು ತಮ್ಮ ಪಾಲಿನ ಅತ್ಯಂತ ದೊಡ್ಡ ಭಾಗ್ಯ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂದು ಭಾವನಾತ್ಮಕವಾಗಿ ಹೇಳಿದರು.

ಈ ಬಾರಿಯ ವಾಯುಪಡೆ ದಿನಾಚರಣೆಯ ಅಂಗವಾಗಿ ಹಿಂಡನ್‌ ವಾಯುನೆಲೆಯಲ್ಲಿ ಸಾಂಪ್ರದಾಯಿಕ ಪರೇಡ್‌ ಹಾಗೂ ವಾಯುಪಡೆಯ ಪ್ರಮುಖ ಯುದ್ಧ ಸಾಮಗ್ರಿಗಳ ಆಕರ್ಷಕ ಪ್ರದರ್ಶನ ನಡೆಯಿತು. ಏರ್‌ ಚೀಫ್‌ ಮಾರ್ಷಲ್‌ ಸಿಂಗ್‌ ಅವರು 1960ರ ದಶಕದ ವಿಂಟೇಜ್‌ ಕಾರಿನಲ್ಲಿ ಪರೇಡ್‌ ಸ್ಥಳಕ್ಕೆ ಆಗಮಿಸಿದ ವೇಳೆ, ಮೂರು ಹೆಲಿಕಾಪ್ಟರ್‌ಗಳು ಧ್ವಜ ರಚನೆಯಲ್ಲಿ ಹಾರಾಟ ನಡೆಸಿ ಗೌರವ ಸಲ್ಲಿಸಿದವು. ಈ ಪ್ರಮುಖ ಕಾರ್ಯಕ್ರಮದಲ್ಲಿ ಮೂರೂ ಸೇನಾ ಪಡೆಗಳ ಮುಖ್ಯಸ್ಥರು, ಹಲವು ಮಾಜಿ ಮುಖ್ಯಸ್ಥರು ಹಾಗೂ ಹಿರಿಯ ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ