ನವದೆಹಲಿ : ಸಾರ್ವಜನಿಕ ಹುದ್ದೆಯಲ್ಲಿ ಸರ್ಕಾರದ ಮುಖ್ಯಸ್ಥನಾಗಿ ನಿರಂತರ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 'ನಾನು ಮಹತ್ವಾಕಾಂಕ್ಷೆಗಾಗಿ ಬದುಕುವವನಲ್ಲ, ಒಂದು ಧ್ಯೇಯಕ್ಕಾಗಿ ಬದುಕುವವನು' ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ 'ವಿಕಸಿತ ಭಾರತ ಸಂಕಲ್ಪ ಸಭೆ'ಯಲ್ಲಿ ಮಾತನಾಡಿದ ಅವರು, ತಮಗೆ ಚುನಾವಣಾ ರಾಜಕಾರಣದಲ್ಲಿ ಮಿಂಚುವ ಆಸೆ ಇರಲಿಲ್ಲ ಮತ್ತು ಸಂಘಟನೆಯ ಕಾರ್ಯಕರ್ತನಾಗಿ ಜನರ ಸೇವೆ ಮಾಡುವುದೇ ತಮ್ಮ ಪ್ರಮುಖ ಆದ್ಯತೆಯಾಗಿತ್ತು ಎಂದಿದ್ದಾರೆ.
2001ರ ಅಕ್ಟೋಬರ್ 7ರಂದು ಯಾವುದೇ ಶಾಸಕಾಂಗ ಅಥವಾ ಸಂಸದೀಯ ಅನುಭವವಿಲ್ಲದೆ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಸ್ಮರಿಸಿದ ಪ್ರಧಾನಿ, 'ಒಂದು ದಿನ ಸರ್ಕಾರದ ಮುಖ್ಯಸ್ಥನಾಗಿ 25 ವರ್ಷ ಪೂರೈಸುತ್ತೇನೆ ಎಂದು ಭಾವಿಸಿರಲಿಲ್ಲ. ದೇಶದ ಜನತೆ, ಬಿಜೆಪಿ, ಎನ್‌ಡಿಎ ಸಹೋದ್ಯೋಗಿಗಳು ಮತ್ತು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ಅಗಾಧ ನಂಬಿಕೆಯಿಂದಲೇ ಈ ಮೈಲುಗಲ್ಲು ಸಾಧ್ಯವಾಗಿದೆ. ನನ್ನ ಕರ್ಮವೇ ನನ್ನ ಧರ್ಮ' ಎಂದು ದೇಶದ ಜನತೆಗೆ ಶಿರಬಾಗಿ ಕೃತಜ್ಞತೆ ಸಲ್ಲಿಸಿದರು.
ಯುವಕರಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪೂರ್ಣಾವಧಿ ಪ್ರಚಾರಕರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಮೋದಿ, 1980ರ ದಶಕದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಸಂಘಟನಾತ್ಮಕವಾಗಿ ಸಕ್ರಿಯರಾದರು. 1990ರ ಸೋಮನಾಥ-ಅಯೋಧ್ಯೆ ರಥಯಾತ್ರೆ ಹಾಗೂ ಏಕತಾ ಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, 1995ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ 1998ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.
2001ರಲ್ಲಿ ಕೇಶುಭಾಯಿ ಪಟೇಲ್ ಅವರ ನಂತರ ಗುಜರಾತ್ ಮುಖ್ಯಮಂತ್ರಿಯಾಗಿ ನೇಮಕಗೊಂಡ ಅವರು, 2002ರ ಫೆಬ್ರವರಿಯಲ್ಲಿ ನಡೆದ ರಾಜ್‌ಕೋಟ್ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಚೊಚ್ಚಲ ಚುನಾವಣಾ ಗೆಲುವು ದಾಖಲಿಸಿದರು. ಅಂದಿನಿಂದ ನಿರಂತರವಾಗಿ ಜನಾದೇಶ ಪಡೆಯುತ್ತಾ ಬಂದಿರುವ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಪ್ರಸ್ತುತ ಭಾರತದ ಪ್ರಧಾನಿಯಾಗಿ ಸತತ 25 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿ ದೇಶ ಸೇವೆ ಸಲ್ಲಿಸಿದ ಐತಿಹಾಸಿಕ ಮೈಲುಗಲ್ಲು ತಲುಪಿದ್ದಾರೆ.