image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಂಬರುವ ಆರ್ಥಿಕ ಸವಾಲಿಗೆ 3 ವರ್ಷದ ಎಮರ್ಜೆನ್ಸಿ ಫಂಡ್ ನಿರ್ಮಿಸಲು ಮುತ್ತುಕೃಷ್ಣನ್ ಸಲಹೆ: ಜಾಲತಾಣದಲ್ಲಿ ಗರಿಗೆದರಿದ ಚರ್ಚೆ

ಮುಂಬರುವ ಆರ್ಥಿಕ ಸವಾಲಿಗೆ 3 ವರ್ಷದ ಎಮರ್ಜೆನ್ಸಿ ಫಂಡ್ ನಿರ್ಮಿಸಲು ಮುತ್ತುಕೃಷ್ಣನ್ ಸಲಹೆ: ಜಾಲತಾಣದಲ್ಲಿ ಗರಿಗೆದರಿದ ಚರ್ಚೆ

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುತ್ತ ಬಂದಿರುವ ಪ್ರಸಿದ್ಧ ಹಣಕಾಸು ಸಲಹೆಗಾರ ಮುತ್ತುಕೃಷ್ಣನ್ ದಂಡಪಾಣಿ ಅವರು ನೀಡಿರುವ ಆರ್ಥಿಕ ಸಲಹೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಕಠಿಣವಾಗುವ ಸಾಧ್ಯತೆಯಿದ್ದು, ಪ್ರತಿಯೊಬ್ಬರೂ ತಮ್ಮ ಕುಟುಂಬದ ಮೂರು ವರ್ಷದ ವೆಚ್ಚಕ್ಕೆ ಆಗುವಷ್ಟು ತುರ್ತು ನಿಧಿ (ಎಮರ್ಜೆನ್ಸಿ ಫಂಡ್) ನಿರ್ಮಿಸಬೇಕು ಹಾಗೂ ಯಾವುದೇ ಹೊಸ ಸಾಲ ಮಾಡಬಾರದು ಎಂದು ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಈ ಕುರಿತು ವಿವರಣೆ ನೀಡಿರುವ ಮುತ್ತುಕೃಷ್ಣನ್, "ನಾನೇನೂ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್ ಅಲ್ಲ, ಆದರೆ ಕಳೆದ ಎರಡು ವರ್ಷಗಳಿಂದ ಆರ್ಥಿಕ ವಲಯದಲ್ಲಿ ಕಾಣಿಸುತ್ತಿರುವ ಸವಾಲುಗಳ ಬಗ್ಗೆ ಎಚ್ಚರಿಸುತ್ತಿದ್ದೇನೆ. ನಿಮ್ಮ ಕುಟುಂಬಕ್ಕೆ ಮೂರು ವರ್ಷಗಳಿಗೆ ಸಾಕಾಗುವಷ್ಟು ಭದ್ರವಾದ ತುರ್ತು ನಿಧಿಯನ್ನು ಕಾಯ್ದಿರಿಸಿ. ಯಾವುದೇ ಹೊಸ ಸಾಲಗಳನ್ನು ತೆಗೆದುಕೊಳ್ಳಬೇಡಿ. ರಿಯಲ್ ಎಸ್ಟೇಟ್ ಅಥವಾ ಮನೆ ಖರೀದಿಯಂತಹ ದೀರ್ಘಾವಧಿಯ ಹಣಕಾಸಿನ ಬದ್ಧತೆಗಳಿಗೆ ಸದ್ಯಕ್ಕೆ ಕೈಹಾಕಬೇಡಿ. ಉದ್ಯೋಗದ ಹುದ್ದೆಗಳಿಗಿಂತ ಆದಾಯದ ಮೂಲವನ್ನು ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿ" ಎಂದು ಹೇಳಿದ್ದಾರೆ. ಆರ್ಥಿಕ ಚಕ್ರದಲ್ಲಿ ಇಂತಹ ಏರಿಳಿತಗಳು ಸಹಜವಾಗಿದ್ದು, ಕಷ್ಟದ ಕಾಲದ ನಂತರ ಮತ್ತೆ ಒಳ್ಳೆಯ ದಿನಗಳು ಬರಲಿವೆ ಎಂದೂ ಅವರು ಅಭಯ ನೀಡಿದ್ದಾರೆ.

ಕಳೆದ 13 ವರ್ಷಗಳಿಂದ ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗಳು ವಿಭಿನ್ನ ಆಯಾಮ ಪಡೆದುಕೊಂಡಿವೆ. ಅನೇಕ ನೆಟ್ಟಿಗರು ಈ ಸಲಹೆಯನ್ನು ಟ್ರೋಲ್ ಮಾಡಿದ್ದು, ಸಾಮಾನ್ಯ ಮಧ್ಯಮ ವರ್ಗದ ಜನರಿಗೆ 3 ತಿಂಗಳ ವೆಚ್ಚದ ಹಣ ಕಾಯ್ದಿರಿಸುವುದೇ ಕಷ್ಟವಾಗಿರುವಾಗ 3 ವರ್ಷಗಳ ಫಂಡ್ ನಿರ್ಮಿಸುವುದು ಪ್ರಾಯೋಗಿಕವಾಗಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಸಣ್ಣ ಹೂಡಿಕೆದಾರರಲ್ಲಿ ಅನಗತ್ಯ ಆತಂಕ ಹಾಗೂ ಭಯ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ. ಆದರೆ, ಆರ್ಥಿಕ ಹಿಂಜರಿತದ ಮುನ್ನೆಚ್ಚರಿಕೆಯಾಗಿ ಈ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂಬ ವಾದವೂ ಕೇಳಿಬರುತ್ತಿದೆ.

Category
ಕರಾವಳಿ ತರಂಗಿಣಿ