image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮತದಾನದ ಹಕ್ಕು ಕಸಿಯುವುದು ಅಸಾಂವಿಧಾನಿಕ: ನ್ಯಾ. ಉಜ್ಜಲ್ ಭುಯಾನ್

ಮತದಾನದ ಹಕ್ಕು ಕಸಿಯುವುದು ಅಸಾಂವಿಧಾನಿಕ: ನ್ಯಾ. ಉಜ್ಜಲ್ ಭುಯಾನ್

ನವದೆಹಲಿ : ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡು ಅವರನ್ನು ತಮ್ಮದೇ ದೇಶದಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿಸುವ ಯಾವುದೇ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಹಾಗೂ ಇಂತಹ ಕ್ರಮ ಮೂಲತಃ ನಿರಂಕುಶವಾದದ್ದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಪ್ರತಿಪಾದಿಸಿದ್ದಾರೆ.

19ನೇ NALSAR ನ್ಯಾಯಮೂರ್ತಿ ಬಿ.ಆರ್. ಸಾಹ್ನಿ ಸ್ಮಾರಕ ಅಣಕು ನ್ಯಾಯಾಲಯ ಸ್ಪರ್ಧೆ-2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮತದಾನದ ಹಕ್ಕು ಕೇವಲ ಶಾಸನಬದ್ಧ ಹಕ್ಕಲ್ಲ; ಅದು ಸಂವಿಧಾನದ 326ನೇ ವಿಧಿಯಿಂದ ದೊರೆಯುವ ಸಾಂವಿಧಾನಿಕ ಹಕ್ಕಾಗಿದೆ ಎಂದು ಸ್ಪಷ್ಟಪಡಿಸಿದರು. ಭಾರತೀಯ ಸಂವಿಧಾನವು ನಾಗರಿಕರನ್ನು 'ಮತದಾನದ ಹಕ್ಕು ಇರುವವರು' ಮತ್ತು 'ಮತದಾನದ ಹಕ್ಕು ಇಲ್ಲದವರು' ಎಂದು ಎರಡು ವರ್ಗಗಳಾಗಿ ವಿಂಗಡಿಸುವುದಿಲ್ಲ. ಹೀಗಾಗಿ ಲಕ್ಷಾಂತರ ಜನರನ್ನು ಸಾಮೂಹಿಕವಾಗಿ ಮತದಾನದ ಹಕ್ಕಿನಿಂದ ವಂಚಿಸುವ ಯಾವುದೇ ಪ್ರಕ್ರಿಯೆಯು ಸಂವಿಧಾನದ 14 ಮತ್ತು 326ನೇ ವಿಧಿಗಳ ನೇರ ಉಲ್ಲಂಘನೆಯಾಗುತ್ತದೆ ಎಂದರು.

ಮತದಾನದ ಹಕ್ಕು ಸಂವಿಧಾನದ ಮೂಲಭೂತ ರಚನೆಯ ಸಿದ್ಧಾಂತದ (basic structure doctrine) ಅವಿಭಾಜ್ಯ ಅಂಗವಾಗಿದ್ದು, ಪೌರತ್ವದ ಮೂಲ ಸಾರವಾಗಿದೆ. ಸಾಮಾನ್ಯ ನಾಗರಿಕ ದೇಶದ ಆಡಳಿತದಲ್ಲಿ ಭಾಗವಹಿಸಲು ಇರುವ ಏಕೈಕ ಮಾರ್ಗ ಇದಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ಸಂವಿಧಾನದ ಮೂಲಭೂತ ಲಕ್ಷಣಗಳಲ್ಲಿ ಒಂದಾಗಿದ್ದು, ವಯಸ್ಕರ ಮತದಾನದ ಹಕ್ಕಿನ ಸಾಂವಿಧಾನಿಕ ಖಾತರಿಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ನ್ಯಾಯಾಲಯಗಳು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಚುನಾವಣಾ ಆಯೋಗದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಕುರಿತಾಗಿ ಆತಂಕಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಮತದಾರರ ಪಟ್ಟಿಯಲ್ಲಿ ಒಮ್ಮೆ ಹೆಸರು ಸೇರ್ಪಡೆಯಾದ ಬಳಿಕ, 'ಜನತಾ ಪ್ರಾತಿನಿಧ್ಯ ಕಾಯ್ದೆ, 1950'ರ ಅಡಿಯಲ್ಲಿ ಸೂಕ್ತ ನೋಟಿಸ್ ಮತ್ತು ವಿಚಾರಣೆಯ ಅವಕಾಶ ನೀಡದೆ ಅದನ್ನು ತೆಗೆದುಹಾಕುವಂತಿಲ್ಲ ಎಂಬುದನ್ನು 'ಲಾಲ್ ಬಾಬು ಹುಸೇನ್ Vs ಚುನಾವಣಾ ನೋಂದಣಿ ಅಧಿಕಾರಿ' ಪ್ರಕರಣವನ್ನು ಉಲ್ಲೇಖಿಸಿ ನ್ಯಾ. ಭುಯಾನ್ ಸ್ಪಷ್ಟಪಡಿಸಿದರು.

'ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್' ಹಾಗೂ 2023ರ 'ಅನೂಪ್ ಬರಣ್ವಾಲ್' ಪ್ರಕರಣಗಳ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಸ್ತಾಪಿಸಿದ ಅವರು, ಭಾರತೀಯ ಪ್ರಜೆಯ ಮತದಾನದ ಹಕ್ಕನ್ನು ಅಥವಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಹಕ್ಕನ್ನು ಅವರ ಪೌರತ್ವದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ, ಅದು ದೇಹದಿಂದ ಆತ್ಮವನ್ನು ಬೇರ್ಪಡಿಸಿದಂತೆ ಎಂದು ಬಣ್ಣಿಸಿದರು.

Category
ಕರಾವಳಿ ತರಂಗಿಣಿ