ನವದೆಹಲಿ : ಯುಎಇಯಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ಎಫ್‌ಝಡ್1073 (FZ1073) ವಿಮಾನದಲ್ಲಿ ಸಹ-ಪೈಲಟ್‌ನಿಂದ ನಡೆದ ಭೀಕರ ದಾಳಿಯ ನಡುವೆಯೂ ಅಪ್ರತಿಮ ಧೈರ್ಯ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದಾರೆ.
ಆಸ್ಪತ್ರೆಯಲ್ಲಿ ತಲೆಗೆ ಬ್ಯಾಂಡೇಜ್ ಹಾಗೂ ಮೂಗಿನಲ್ಲಿ ಟ್ಯೂಬ್ ಧರಿಸಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಅವರ ಸಮಯೋಚಿತ ಸಮಯಪ್ರಜ್ಞೆ ಮತ್ತು ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಇದಕ್ಕೂ ಮುನ್ನವೇ ಪ್ರಧಾನಿಯವರು ಸ್ಮಿತ್ ಅವರ ಪತ್ನಿ ಹಾಗೂ ಪೋಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಭಾರತೀಯ ರಾಯಭಾರ ಕಚೇರಿಗಳ ಮೂಲಕ ಅಗತ್ಯವಿರುವ ಎಲ್ಲಾ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದರು.
ವಿಡಿಯೋ ಸಂಭಾಷಣೆಯ ವೇಳೆ ಆಪತ್ತಿನ ಭಯಾನಕ ಕ್ಷಣಗಳನ್ನು ಹಂಚಿಕೊಂಡ ಕ್ಯಾಪ್ಟನ್ ಸ್ಮಿತ್, ದಾಳಿಗೊಳಗಾದ ತೀವ್ರ ನಿಮಿಷಗಳಲ್ಲಿ ತಾವು ಹನುಮಾನ್ ಚಾಲೀಸಾ ಪಠಿಸುತ್ತ ಧೈರ್ಯ ತಳೆದು ಕಾಕ್‌ಪಿಟ್ ಬಾಗಿಲು ತೆರೆದಿದ್ದಾಗಿ ತಿಳಿಸಿದರು. ಇದರಿಂದ ಪ್ರಯಾಣಿಕರು ಒಳಪ್ರವೇಶಿಸಿ ದಾಂದಲೆ ನಡೆಸುತ್ತಿದ್ದ ಸಹ-ಪೈಲಟ್‌ನನ್ನು ನಿಯಂತ್ರಿಸಲು ಸಾಧ್ಯವಾಯಿತು. ಗಾಯಗೊಂಡ ಸ್ಥಿತಿಯಲ್ಲೂ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿ ಭಾರೀ ಅನಾಹುತ ತಪ್ಪಿಸಿದ ಸ್ಮಿತ್ ಅವರ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.