image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

​9/11 ಮಾದರಿಯ ಭೀಕರ ದುರಂತ ತಡೆದ ಕ್ಯಾಪ್ಟನ್ ಸ್ಮಿತ್ ಧೈರ್ಯಕ್ಕೆ ದೇಶದ ಪ್ರಶಂಸೆ

​9/11 ಮಾದರಿಯ ಭೀಕರ ದುರಂತ ತಡೆದ ಕ್ಯಾಪ್ಟನ್ ಸ್ಮಿತ್ ಧೈರ್ಯಕ್ಕೆ ದೇಶದ ಪ್ರಶಂಸೆ

ನವದೆಹಲಿ : ಫ್ಲೈದುಬೈ (flydubai) ವಿಮಾನದಲ್ಲಾದ ಗಂಭೀರ ಘಟನೆಯ ಸಂದರ್ಭದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪ್ರದರ್ಶಿಸಿದ ಅಸಾಧಾರಣ ಧೈರ್ಯ ಹಾಗೂ ಸಮಯಪ್ರಜ್ಞೆ 9/11 ಮಾದರಿಯ ಭೀಕರ ದುರಂತವನ್ನು ತಪ್ಪಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ (UPSC) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಹ-ಪೈಲಟ್‌ನಿಂದ ತೀವ್ರ ದಾಳಿಗೊಳಗಾಗಿ ಗಾಯಗೊಂಡರೂ ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ರಕ್ಷಿಸಿದ ಕ್ಯಾಪ್ಟನ್ ಸ್ಮಿತ್ ಅವರ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

​ಮಧ್ಯ ಆಕಾಶದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಸಹ-ಪೈಲಟ್ ನಡೆಸಿದ ದಾಳಿಯಿಂದ ಗಂಭೀರ ಗಾಯಗೊಂಡರೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್, ಸನ್ನಿವೇಶವನ್ನು ಹತೋಟಿಗೆ ತಂದು ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ಗೆ ತಿರುಗಿಸಲು ಶ್ರಮಿಸಿದರು. ಇದೇ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತೀಯ ಪೈಲಟ್‌ನ ಜಾಣಕ್ಷತೆಯಿಂದಾಗಿ ಅತಿ ದೊಡ್ಡ ದುರಂತವೊಂದು ತಪ್ಪಿದೆ ಎಂದು ಇಸ್ರೇಲ್ ಪ್ರಧಾನಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

​ಇದಕ್ಕೂ ಮುನ್ನ ಪ್ರಧಾನಿಯವರು ಕ್ಯಾಪ್ಟನ್ ಸ್ಮಿತ್ ಅವರ ತಂದೆ ಭೂಪೇಂದರ್ ಭಾಯ್, ತಾಯಿ ಗೀತಾ ಬೆಹೆನ್ ಹಾಗೂ ಪತ್ನಿ ಸೋನಾಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಾಂತ್ವನ ಹೇಳಿದರು. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಅವರ ಶೀಘ್ರ ಚೇತರಿಕೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವಂತೆ ಅವರು ದೇಶವಾಸಿಗಳಿಗೆ ಕರೆ ನೀಡಿದರು. ಇನ್ನು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪೈಲಟ್‌ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸಿದ್ದು, ಸೌದಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರಾಯಭಾರ ನೆರವು ನೀಡುವುದಾಗಿ ಭರವಸೆ ನೀಡಿದೆ.

Category
ಕರಾವಳಿ ತರಂಗಿಣಿ