image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಹಲ್ಗಾಮ್ ದಾಳಿ: ವೈರಲ್ ಫೋಟೋದಲ್ಲಿದ್ದ ಲಷ್ಕರ್‌ನ ನಾಲ್ಕೂ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಪಹಲ್ಗಾಮ್ ದಾಳಿ: ವೈರಲ್ ಫೋಟೋದಲ್ಲಿದ್ದ ಲಷ್ಕರ್‌ನ ನಾಲ್ಕೂ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಫೋಟೋದಲ್ಲಿದ್ದ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ನಾಲ್ವರೂ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಸತತ ಕಾರ್ಯಾಚರಣೆಗಳ ಮೂಲಕ ಹತ್ಯೆಗೈದಿವೆ. ಬಡ್ಗಾಂ ಜಿಲ್ಲೆಯ ಪಲ್ಮೈದಾನ್ ಪ್ರದೇಶದಲ್ಲಿ ನಡೆದ 'ಆಪರೇಷನ್ ಕೊರಾಗ್' ಎನ್‌ಕೌಂಟರ್‌ನಲ್ಲಿ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಹಾಶಿಮ್ ಮೂಸಾ ಅಲಿಯಾಸ್ ಫೌಜಿಯನ್ನು ಹೊಡೆದುರುಳಿಸುವುದರೊಂದಿಗೆ ಈ ಬೃಹತ್ ಕಾರ್ಯಾಚರಣೆ ಪೂರ್ಣಗೊಂಡಿದೆ. ಪಾಕಿಸ್ತಾನದ ಸ್ಪೆಷಲ್ ಸರ್ವಿಸ್ ಗ್ರೂಪ್ (SSG)ನ ಮಾಜಿ ಪ್ಯಾರಾ ಕಮಾಂಡೋ ಆಗಿದ್ದ ಹಾಶಿಮ್ ಮೂಸಾ, ಕಾಶ್ಮೀರ ಕಣಿವೆಯಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಪ್ರಮುಖ ರೂವಾರಿಯಾಗಿದ್ದ. ಈತನ ಸುಳಿವು ನೀಡಿದವರಿಗೆ ಜಮ್ಮು-ಕಾಶ್ಮೀರ ಪೊಲೀಸರು 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.

ಈ ವೈರಲ್ ಫೋಟೋದಲ್ಲಿದ್ದ ನಾಲ್ವರ ಪೈಕಿ ಜುನೇದ್ ಅಹಮದ್ ಭಟ್ ಎಂಬ ಉಗ್ರನನ್ನು 2024 ರ ಡಿಸೆಂಬರ್ 3 ರಂದು ದಾಚಿಗಾಮ್ ಅರಣ್ಯ ಪ್ರದೇಶದಲ್ಲಿ ನಡೆದ 'ಆಪರೇಷನ್ ದಾಚಿಗಾಮ್' ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಈತನ ಮೊಬೈಲ್ ಫೋನ್‌ನಿಂದಲೇ ವೈರಲ್ ಆಗಿದ್ದ ನಾಲ್ವರು ಉಗ್ರರ ಚಿತ್ರ ಲಭ್ಯವಾಗಿತ್ತು. ತದನಂತರ 2025 ರ ಜುಲೈ 28 ರಂದು ಅತ್ಯಾಧುನಿಕ ಡ್ರೋನ್ ಹಾಗೂ ಸರ್ವೇಲನ್ಸ್ ತಂತ್ರಜ್ಞಾನ ಬಳಸಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಉಗ್ರ ಸುಲೇಮಾನ್ ಶಹಾನನ್ನು ಹತ್ಯೆ ಮಾಡಲಾಯಿತು.

ಮುಂದಿನ ಹಂತವಾಗಿ 2026 ರ ಸೆಪ್ಟೆಂಬರ್ 6 ರಂದು ಬಡ್ಗಾಂನ ಯುಸ್ಮಾರ್ಗ್ ಪ್ರದೇಶದಲ್ಲಿ ನಡೆದ 'ಆಪರೇಷನ್ ಆಶ್‌ದಾರ್' ಎನ್‌ಕೌಂಟರ್‌ನಲ್ಲಿ ಅಬು ತಲ್ಹಾ ಅಲಿಯಾಸ್ ಯಾಸಿರ್ ಎಂಬ ಉಗ್ರನನ್ನು ಹೊಡೆದುರುಳಿಸಲಾಯಿತು. ಅಂತಿಮವಾಗಿ ಸೆಪ್ಟೆಂಬರ್ 29 ರಂದು ನಡೆದ ಕಾರ್ಯಾಚರಣೆಯಲ್ಲಿ ಕೊನೆಯ ಉಗ್ರ ಹಾಶಿಮ್ ಮೂಸಾನನ್ನು ಹತ್ಯೆ ಮಾಡಲಾಗಿದ್ದು, ಆತನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಪಹಲ್ಗಾಮ್, ಗಗನ್‌ಗೀರ್ ಮತ್ತು ಗುಲ್ಮಾರ್ಗ್ ದಾಳಿಗಳಲ್ಲಿ ಭಾಗಿಯಾಗಿದ್ದ ಎಲ್ಲಾ ಪ್ರಮುಖ ಭಯೋತ್ಪಾದಕರನ್ನು ಯಶಸ್ವಿಯಾಗಿ ಮಟ್ಟಹಾಕುವ ಮೂಲಕ ಭಾರತೀಯ ಭದ್ರತಾ ಪಡೆಗಳು ಭಾರತದ ಮೇಲಿನ ದಾಳಿಗೆ ಸೂಕ್ತ ತಿರುಗೇಟು ನೀಡಿವೆ.

Category
ಕರಾವಳಿ ತರಂಗಿಣಿ