image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮತದಾರರಿಗೆ ಚುನಾವಣಾ ಆಯೋಗದ ಬಿಗ್ ರಿಲೀಫ್: ಮನೆಬಾಗಿಲಿಗೇ ಬರಲಿದ್ದಾರೆ ಬಿಎಲ್‌ಒ!

ಮತದಾರರಿಗೆ ಚುನಾವಣಾ ಆಯೋಗದ ಬಿಗ್ ರಿಲೀಫ್: ಮನೆಬಾಗಿಲಿಗೇ ಬರಲಿದ್ದಾರೆ ಬಿಎಲ್‌ಒ!

ನವದೆಹಲಿ: ದೇಶದ ಪ್ರತಿಯೊಬ್ಬ ಅರ್ಹ ಪ್ರಜೆಗೂ ಮತದಾನದ ಹಕ್ಕು ಸುಲಭವಾಗಿ ತಲುಪಬೇಕು ಎಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಅತ್ಯಂತ ಜನಸ್ನೇಹಿ ನಿರ್ಧಾರಗಳನ್ನು ಕೈಗೊಂಡಿದೆ. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಲಾಗಿದ್ದು, ಸಾರ್ವಜನಿಕರು ಅನುಭವಿಸುತ್ತಿದ್ದ ಅಲೆದಾಟ ಮತ್ತು ತೊಂದರೆಗಳಿಗೆ ಸಂಪೂರ್ಣ ತೆರೆ ಬಿದ್ದಿದೆ. ಇಲ್ಲಿಯವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಅಥವಾ ಇತರ ತಾಂತ್ರಿಕ ವ್ಯತ್ಯಾಸಗಳು ಕಂಡುಬಂದಲ್ಲಿ ನಾಗರಿಕರು ಸ್ವತಃ ನಿರ್ದಿಷ್ಟ ಕಚೇರಿಗಳಿಗೆ ಅಲೆದು ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಆಯೋಗದ ನೂತನ ಆದೇಶದ ಪ್ರಕಾರ, ಇನ್ಮುಂದೆ ಸಾರ್ವಜನಿಕರು ಯಾವುದೇ ವಿಚಾರಣೆಗೆ ಖುದ್ದಾಗಿ ಕಚೇರಿಗಳಿಗೆ ತೆರಳುವ ಅಗತ್ಯವಿಲ್ಲ.

ಬದಲಾಗಿ ಬೂತ್ ಮಟ್ಟದ ಅಧಿಕಾರಿಗಳು (BLO) ನೇರವಾಗಿ ಸಾರ್ವಜನಿಕರ ಮನೆಬಾಗಿಲಿಗೆ ಆಗಮಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ 'ECINet' ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಿದ್ದಾರೆ. ಅತ್ಯಂತ ಅಪರೂಪದ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಯಲಿದ್ದು, ಅದನ್ನು ಸಹ ಆನ್‌ಲೈನ್ ಮೂಲಕವೇ ಸುಲಭವಾಗಿ ನಡೆಸಲು ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಒಂದು ವೇಳೆ ಮತದಾರರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಮನೆಯ ಯಾವುದೇ ಹಿರಿಯ ವ್ಯಕ್ತಿಯನ್ನು ಕಳುಹಿಸಿಕೊಡಲು ಅವಕಾಶ ನೀಡಲಾಗಿದೆ.

ಇತ್ತೀಚೆಗೆ ಆಯೋಗದ ಒಳಗಿನ ತಾಂತ್ರಿಕ ಮತ್ತು ನಿಯಂತ್ರಣ ವ್ಯವಸ್ಥೆಯ ಕುರಿತು ಮೂಡಿದ ಗೊಂದಲಗಳ ಹಿನ್ನೆಲೆಯಲ್ಲಿ, ನವದೆಹಲಿಯಲ್ಲಿ ಮೂವರು ಕಮಿಷನರ್‌ಗಳ ಉಪಸ್ಥಿತಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ 'ECINet' ಪೋರ್ಟಲ್‌ನ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ರಿವ್ಯೂ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ, 'ಫಾರ್ಮ್ 6' ಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಸಂಪೂರ್ಣವಾಗಿ ಎತ್ತಿಹಿಡಿಯಲಾಗಿದ್ದು, ನಿಯಮಾನುಸಾರವೇ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ ಎಂದು ಆಯೋಗ ಸ್ಪಷ್ಟಪಡಿಸಿದೆ.

Category
ಕರಾವಳಿ ತರಂಗಿಣಿ