ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಕೊರತೆಯ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಈ ಕೊರತೆ ನೀರಿನ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸುತ್ತಿಲ್ಲ ಎಂದು ತಮಿಳುನಾಡು ನ್ಯಾಯಾಲಯಕ್ಕೆ ತಿಳಿಸಿದೆ.
ಕರ್ನಾಟಕವು ಸಂಪೂರ್ಣ ನೀರನ್ನು ತನ್ನದಾಗಿಸಿಕೊಳ್ಳುವ ಮೂಲಕ ತಮಿಳುನಾಡನ್ನು ವಂಚಿಸುತ್ತಿದೆ, ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ತಮಿಳುನಾಡು ಪರ ವಾದ ಮಂಡಿಸಿದ ವಕೀಲ ಸಿ.ಎಸ್. ವೈದ್ಯನಾಥನ್, "ಕರ್ನಾಟಕದಿಂದ ನೀರು ಹರಿಸುವ ವಿಚಾರದಲ್ಲಿ ಸುಮಾರು 20 ಟಿಎಂಸಿ ಕೊರತೆಯಾಗಿದೆ. ನೀರಿನ ಅಭಾವದಿಂದಾಗಿ ನಾವು ಮೊದಲ ಕುರುವೈ ಬೆಳೆ ನಷ್ಟ ಅನುಭವಿಸಿದ್ದೇವೆ. ಪ್ರಸ್ತುತ ಮುಂಗಾರು ಹಿಮ್ಮೆಟ್ಟಿದ್ದು ಇನ್ನು ಮಳೆಯಾಗುವ ಸಾಧ್ಯತೆ ಕಡಿಮೆ ಇದೆ, ಆದರೂ ಕರ್ನಾಟಕದ ಅಣೆಕಟ್ಟೆಗಳಲ್ಲಿ ನೀರಿದೆ" ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಕರ್ನಾಟಕದ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಸಿಡಬ್ಲ್ಯೂಎಂಎ ಸೂಚನೆಯಂತೆಯೇ ನೀರು ಹರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಬೆಳೆ ಹಾನಿ, ಮುಂಗಾರು ಮಳೆಯ ಕೊರತೆ ಹಾಗೂ ಬರಗಾಲದ ಪರಿಸ್ಥಿತಿ ಇದ್ದಾಗ್ಯೂ ಸೂಚನೆಯಂತೆ 15 ದಿನಗಳ ಕಾಲ ದಿನಕ್ಕೆ 6,000 ಕ್ಯೂಸೆಕ್ ನೀರು ಹರಿಸಲಾಗಿದ್ದು, ಇದೀಗ ತಮಿಳುನಾಡು ಸರ್ಕಾರ ಕೊರತೆಯ ನೆಪವೊಡ್ಡಿ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ವಾದಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು, ಸೆಪ್ಟೆಂಬರ್ 8ರಂದು ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿದ್ದೀರಾ ಹಾಗೂ ಹಂಚಿಕೆಯಾದ ನೀರು ಸಾಕಾಗಿಲ್ಲವೇ ಎಂದು ತಮಿಳುನಾಡನ್ನು ಪ್ರಶ್ನಿಸಿತು. ತಮಿಳುನಾಡು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ವಾರದೊಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ನಿಗದಿಪಡಿಸಿದೆ.