image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

‘ಮತ ಕಳ್ಳತನ’ ಆರೋಪ: ಸೆ. 29ಕ್ಕೆ ಸಿಡಬ್ಲ್ಯೂಸಿ ಸಭೆ, ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್‌ ಸಜ್ಜು

‘ಮತ ಕಳ್ಳತನ’ ಆರೋಪ: ಸೆ. 29ಕ್ಕೆ ಸಿಡಬ್ಲ್ಯೂಸಿ ಸಭೆ, ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್‌ ಸಜ್ಜು

ನವದೆಹಲಿ: ಭಾರತೀಯ ಚುನಾವಣಾ ಆಯೋಗದ (ECI) ಕಾರ್ಯನಿರ್ವಹಣೆ ಮತ್ತು ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತ ಭಾರೀ ವಿವಾದ ಸೃಷ್ಟಿಯಾಗಿದ್ದು, ಇದರ ವಿರುದ್ಧ ದೇಶಾದ್ಯಂತ ಬೃಹತ್ ಜನಚಳವಳಿ ಆರಂಭಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. 'ಮತ ಕಳ್ಳತನ' (Vote Chori) ಹಾಗೂ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸೆಪ್ಟೆಂಬರ್ 29 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯನ್ನು ಕರೆಯಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರಾದ ಎಸ್.ಎಸ್. ಸಂಧು ಹಾಗೂ ವಿವೇಕ್ ಜೋಶಿ ಅವರ ಆಕ್ಷೇಪಣೆಗಳನ್ನು ಕಡೆಗಣಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ವರದಿಗಳು ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿವೆ. ಮತದಾರರ ಪಟ್ಟಿಯಿಂದ ಬರೋಬ್ಬರಿ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಹೈಕಮಾಂಡ್, ಈ ಕ್ರಮವನ್ನು 'ದೇಶದ್ರೋಹದ ಕೃತ್ಯ' ಎಂದು ಪರಿಗಣಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಎಲ್ಲಾ ರಾಜ್ಯಗಳ ಉಸ್ತುವಾರಿಗಳು ಹಾಗೂ ಪ್ರಮುಖರೊಂದಿಗೆ ಆನ್‌ಲೈನ್ ಸಭೆ ನಡೆಸಿ ಹೋರಾಟದ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ. ಸೆಪ್ಟೆಂಬರ್ 29ರ CWC ಸಭೆಯಲ್ಲಿ 'ವೋಟ್ ಚೋರಿ' ವಿರುದ್ಧ ಅಧಿಕೃತ ನಿರ್ಣಯ ಅಂಗೀಕರಿಸುವ ಸಾಧ್ಯತೆಯಿದೆ.

ಈ ಕುರಿತು ನೀಡಿರುವ ಹೇಳಿಕೆಯಲ್ಲಿ CWC ಸದಸ್ಯ ಕಮಲೇಶ್ವರ್ ಪಟೇಲ್, "ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿರುವುದು ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಗಂಭೀರ ವಿಷಯವಾಗಿದೆ. ಇದನ್ನು ಕೇವಲ ಪತ್ರಿಕಾಗೋಷ್ಠಿಗಳಿಗೆ ಸೀಮಿತಗೊಳಿಸದೇ, ಪ್ರತಿಯೊಬ್ಬ ಮತದಾರನ ಬಳಿಗೂ ಕೊಂಡೊಯ್ಯಲು ಬೃಹತ್ ಚಳವಳಿ ರೂಪಿಸಲಾಗುವುದು" ಎಂದಿದ್ದಾರೆ.

ಚುನಾವಣಾ ಆಯೋಗವು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಈ ಜನಚಳವಳಿಯನ್ನು ಮತ್ತಷ್ಟು ಶಕ್ತಿಯುತಗೊಳಿಸಲು 'ಇಂಡಿಯಾ' (INDIA) ಮೈತ್ರಿಕೂಟದ ಎಲ್ಲಾ ಮಿತ್ರಪಕ್ಷಗಳನ್ನು ಒಗ್ಗೂಡಿಸಿ ಒಂದೇ ಧ್ವನಿಯಲ್ಲ ಪ್ರತಿಭಟಿಸಲು ಯೋಜನೆ ರೂಪಿಸುತ್ತಿದೆ.

Category
ಕರಾವಳಿ ತರಂಗಿಣಿ