image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸೆಪ್ಟೆಂಬರ್ 28 ರಿಂದ 3 ದಿನ ಬ್ಯಾಂಕ್ ಮುಷ್ಕರ ಖಚಿತ: ಸಂಧಾನ ಸಭೆ ವಿಫಲ

ಸೆಪ್ಟೆಂಬರ್ 28 ರಿಂದ 3 ದಿನ ಬ್ಯಾಂಕ್ ಮುಷ್ಕರ ಖಚಿತ: ಸಂಧಾನ ಸಭೆ ವಿಫಲ

ನವದೆಹಲಿ: ಬ್ಯಾಂಕಿಂಗ್ ಕೆಲಸದ ದಿನಗಳನ್ನು ವಾರಕ್ಕೆ 5 ದಿನಗಳಿಗೆ ಇಳಿಸಬೇಕು ಎಂಬ ಬೇಡಿಕೆ ಕುರಿತು ಮಂಗಳವಾರ ನವದೆಹಲಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28, 29 ಮತ್ತು 30 ರಂದು ಮೂರು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯುವುದು ಖಚಿತವಾಗಿದೆ.

ಉಪ ಮುಖ್ಯ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA), ಹಣಕಾಸು ಸೇವೆಗಳ ಇಲಾಖೆ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಭಾಗವಹಿಸಿದ್ದವು. 5 ದಿನಗಳ ಕೆಲಸದ ವಾರದ ಬೇಡಿಕೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ ಅಧಿಕಾರಿಗಳು ಮುಷ್ಕರವನ್ನು ಮುಂದೂಡುವಂತೆ ಮನವಿ ಮಾಡಿದರು. ಆದರೆ, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸ್ಪಷ್ಟ ಹಾಗೂ ನಿಖರ ಪ್ರಗತಿ ಕಾಣದ ಹೊರತು ಮುಷ್ಕರದ ನಿರ್ಧಾರವನ್ನು ಮರುಪರಿಶೀಲಿಸುವುದಿಲ್ಲ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸ್ಪಷ್ಟಪಡಿಸಿದೆ.

ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಷನ್ (AIBOC) ಸುತ್ತೋಲೆಯಂತೆ, ಮಾತುಕತೆಯಲ್ಲಿ ಯಾವುದೇ ಸಕಾರಾತ್ಮಕ ಪ್ರಗತಿ ಕಾಣದ ಕಾರಣ ಮುಷ್ಕರವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಮಂಗಳವಾರದ ಸಭೆಯಲ್ಲಿ ಯಾವುದೇ ಹೊಸ ಬೆಳವಣಿಗೆ ನಡೆದಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದು, ಈ 3 ದಿನಗಳ ದೇಶವ್ಯಾಪಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಯುಎಫ್‌ಬಿಯು ತನ್ನ ಎಲ್ಲಾ ಅಂಗಸಂಸ್ಥೆಗಳು ಮತ್ತು ಸದಸ್ಯರಿಗೆ ಕರೆ ನೀಡಿದೆ.

Category
ಕರಾವಳಿ ತರಂಗಿಣಿ