image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಯುಪಿ, ಉತ್ತರಾಖಂಡ, ಪಶ್ಚಿಮ ಬಂಗಾಳದ 12 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಚುನಾವಣೆ

ಯುಪಿ, ಉತ್ತರಾಖಂಡ, ಪಶ್ಚಿಮ ಬಂಗಾಳದ 12 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಚುನಾವಣೆ

ನವದೆಹಲಿ : ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಒಟ್ಟು 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಹಾಗೂ ಉಪಚುನಾವಣೆಯನ್ನು ಅಕ್ಟೋಬರ್ 16 ರಂದು ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಉತ್ತರ ಪ್ರದೇಶದ 10 ಮತ್ತು ಉತ್ತರಾಖಂಡದ 1 ಸ್ಥಾನ ಸೇರಿದಂತೆ ಒಟ್ಟು 11 ಹಾಲಿ ಸದಸ್ಯರ ಅಧಿಕಾರಾವಧಿಯು ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಈ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.

ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವವರಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಬಿ.ಎಲ್. ವರ್ಮಾ, ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಹಾಗೂ ಉತ್ತರಾಖಂಡದ ನರೇಶ್ ಬನ್ಸಾಲ್ ಸೇರಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಹಾಗೂ ನಟಿ ರುಕ್ಮಿಣಿ ಮಲ್ಲಿಕ್ ಅವರು ರಾಜೀನಾಮೆ ನೀಡಿದ್ದರಿಂದ ಖಾಲಿಯಾದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿಯಂತೆ ಸೆಪ್ಟೆಂಬರ್ 29 ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಅಕ್ಟೋಬರ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ 7 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಅಕ್ಟೋಬರ್ 9 ರಂದು ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಅಕ್ಟೋಬರ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆಯೂ ಪೂರ್ಣಗೊಳ್ಳಲಿದೆ. ಮತಪತ್ರದಲ್ಲಿ ಆದ್ಯತೆಗಳನ್ನು ಗುರುತಿಸಲು ಚುನಾವಣಾಧಿಕಾರಿಗಳು ಒದಗಿಸುವ ನಿರ್ದಿಷ್ಟ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ.

Category
ಕರಾವಳಿ ತರಂಗಿಣಿ