ಕೋಲ್ಕತ್ತಾ: ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಿಂದ ತಮ್ಮ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ದಿಢೀರ್ ನಾಮಪತ್ರ ಹಿಂಪಡೆದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಬಣವು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ನೀಡುವುದಾಗಿ ಶುಕ್ರವಾರ ಪ್ರಕಟಿಸಿದೆ. 1998 ರಲ್ಲಿ ತಾವೇ ಸ್ಥಾಪಿಸಿದ್ದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳುವ ಹೋರಾಟದ ನಡುವೆಯೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಕರೆ ಮಾಡಿ ಮಾತನಾಡಿದ್ದರು. ನಾವಿಬ್ಬರೂ ಒಂದಾಗಿದ್ದು, ಬಿಜೆಪಿಗೆ ಶರಣಾಗುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗೆ ದೀದಿ ಬಣವು ಸಂಚಿತಾ ಪ್ರಧಾನ್ ಡೇ ಅವರನ್ನು ಅಭ್ಯರ್ಥಿಯನ್ನಾಗಿ ಭಾನುವಾರ ಘೋಷಿಸಿತ್ತು. ಆದರೆ, ಗುರುವಾರ ರಾತ್ರಿ ಹಾಗೂ ಶುಕ್ರವಾರ ನಬನ್ನಾದಲ್ಲಿರುವ ರಾಜ್ಯ ಸಚಿವಾಲಯದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿರುವುದರಿಂದ, ಅವರ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮಮತಾ ಬ್ಯಾನರ್ಜಿ ಬಣಕ್ಕೆ ಅವಕಾಶವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ, ಮುಂಚಿತವಾಗಿ ನಿರ್ಧರಿಸಿದ್ದಂತೆ ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಿರುವುದಾಗಿ ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಕೇಂದ್ರ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಕ್ರಮ ನೇಮಕಾತಿ ಹಗರಣದಿಂದಾಗಿ ಕೆಲಸ ಕಳೆದುಕೊಂಡಿದ್ದ ಶಿಕ್ಷಕಿ ಸಂಚಿತಾ ಡೇ ರಾಜಕೀಯ ಅಖಾಡಕ್ಕೆ ತೀರಾ ಹೊಸ ಅಭ್ಯರ್ಥಿಯಾಗಿದ್ದರು. 2021 ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರೂ, ನಂತರ ಭವಾನಿಪುರ ಉಪಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ನಿಯಮಾವಳಿಗಳ ಪ್ರಕಾರ ಒಬ್ಬರು ಎರಡು ಕ್ಷೇತ್ರಗಳನ್ನು ಪ್ರತಿನಿಧಿಸುವಂತಿಲ್ಲವಾದ್ದರಿಂದ, ಸುವೇಂದು ಅವರು ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಎದುರಾಗಿದೆ.
ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್‌ನ ಮೂಲ ಹೆಸರು ಮತ್ತು ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಮಮತಾ ಬ್ಯಾನರ್ಜಿ ಬಣವಾಗಲಿ ಅಥವಾ ರಿತಬ್ರತ ಬ್ಯಾನರ್ಜಿ ಬಣವಾಗಲಿ ಈ ಚುನಾವಣೆಯಲ್ಲಿ ಆ ಚಿಹ್ನೆಯನ್ನು ಬಳಸಲು ಸಾಧ್ಯವಿಲ್ಲ. ಸಂಚಿತಾ ಡೇ ಅವರ ನಿರ್ಧಾರವು ನಂದಿಗ್ರಾಮದಲ್ಲಿ ಆಡಳಿತಾರೂಢ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಹೀಗಿದ್ದರೂ ನಂದಿಗ್ರಾಮದಲ್ಲಿ ಬಹುಮುಖಿ ಸ್ಪರ್ಧೆ ಕಾಯ್ದುಕೊಂಡಿದ್ದು, ರಿತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದಿಂದ ಮೊಹಮ್ಮದ್ ಎತೆಶಮುಲ್ ಹಕ್, ಸಿಪಿಐನಿಂದ ಶಾಂತಿ ಗೋಪಾಲ್ ಗಿರಿ, ಬಿಜೆಪಿಯಿಂದ ಹಸಿರಾಣಿ ರಥ್ ಹಾಗೂ ಕಾಂಗ್ರೆಸ್‌ನಿಂದ ಮಿಲನ್ ಪ್ರಧಾನ್ ಕಣದಲ್ಲಿದ್ದಾರೆ.