ಭೋಪಾಲ್ : ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಅವರು ತಮ್ಮ ಬೀಳ್ಕೊಡುಗೆಯ ದಿನದಂದು ಕೈಗೊಂಡ ಸಮಾಜಮುಖಿ ನಿರ್ಧಾರಗಳ ಮೂಲಕ ಮಾದರಿಯಾಗಿದ್ದಾರೆ. ಜಬಲ್‌ಪುರದಲ್ಲಿ ನಡೆದ ಹೈಕೋರ್ಟ್‌ನ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಜನರಲ್ ಪ್ರಾವಿಡೆಂಟ್ ಫಂಡ್‌ನ (GPF) ₹1.01 ಕೋಟಿ ಮೊತ್ತವನ್ನು PM CARES Fundಗೆ ನೀಡುವುದಾಗಿ ಘೋಷಿಸಿದ್ದಾರೆ. ತಮ್ಮ ವೈಯಕ್ತಿಕ ಜೀವಿತಾವಧಿಯ ಗಳಿಕೆಯ ಒಂದು ಭಾಗ ರಾಷ್ಟ್ರ ನಿರ್ಮಾಣ ಹಾಗೂ ಸಮಾಜದ ಅಗತ್ಯಗಳಿಗೆ ಬಳಕೆಯಾಗಬೇಕು ಎಂಬ ಆಶಯದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಹಣಕಾಸಿನ ಸಹಾಯದ ಜೊತೆಗೆ, ವೈದ್ಯಕೀಯ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಗಾಗಿ ಮರಣಾನಂತರ ತಮ್ಮ ದೇಹವನ್ನು ದಾನ ಮಾಡಲು ನ್ಯಾಯಮೂರ್ತಿ ಸಿಂಗ್ ಹಾಗೂ ಅವರ ಪತ್ನಿ ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೂ ಎರಡು ದಿನಗಳ ಮುನ್ನವೇ ಇಬ್ಬರೂ ಜಬಲ್‌ಪುರದ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನಕ್ಕೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ತಮ್ಮ ಮರಣಾನಂತರದ ದೇಹವು ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಉಪಯೋಗವಾಗಲಿ ಎಂಬ ಉದಾತ್ತ ಚಿಂತನೆ ಈ ದಂಪತಿಯದ್ದಾಗಿದೆ.
1990ರಲ್ಲಿ ಸಿವಿಲ್ ಜಡ್ಜ್ ಆಗಿ ನ್ಯಾಯಾಂಗ ಸೇವೆ ಆರಂಭಿಸಿ, 2023ರ ಮೇ ತಿಂಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದ ಅವನೀಂದ್ರ ಕುಮಾರ್ ಸಿಂಗ್ ಅವರು ಸುಮಾರು ಮೂರು ವರ್ಷಗಳ ಹೈಕೋರ್ಟ್ ಸೇವೆಯ ನಂತರ ಸೆಪ್ಟೆಂಬರ್ 17ರಂದು ನಿವೃತ್ತರಾದರು. ಜೀವಿತಾವಧಿಯ ಸೇವೆಯ ಜೊತೆಗೆ ನಿವೃತ್ತಿಯ ಕ್ಷಣದಲ್ಲೂ ಸಮಾಜಕ್ಕೆ ನೀಡಿದ ಈ ಕೊಡುಗೆ ನ್ಯಾಯಾಂಗ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.