ನವದೆಹಲಿ : ಅರಬ್ಬೀ ಸಮುದ್ರದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಿಯಮಿತ ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದ ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಪಾಕಿಸ್ತಾನಿ ಪಡೆಯ ಹಡಗೊಂದು ಅಪಾಯಕಾರಿ ರೀತಿಯಲ್ಲಿ ಬಂದು ಡಿಕ್ಕಿ ಹೊಡೆದಿದೆ. ಈ ನಡೆ ಸಂಪೂರ್ಣ ವೃತ್ತಿಪರವಲ್ಲದ್ದು ಎಂದು ತೀವ್ರವಾಗಿ ಖಂಡಿಸಿರುವ ಭಾರತ, ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಹಂಗಾಮಿ ಮುಖ್ಯಸ್ಥರನ್ನು (ಚಾರ್ಜ್ ಡಿ ಅಫೇರ್ಸ್) ವಿದೇಶಾಂಗ ಸಚಿವಾಲಯಕ್ಕೆ (MEA) ಕರೆಸಿಕೊಂಡು ತನ್ನ ತೀವ್ರ ಆಕ್ಷೇಪವನ್ನು ದಾಖಲಿಸಿದೆ.
ಈ ಘಟನೆಯಿಂದ ಭಾರತೀಯ ನೌಕೆಗೆ ಯಾವುದೇ ರೀತಿಯ ದೊಡ್ಡ ಹಾನಿ ಅಥವಾ ಅಪಾಯ ಸಂಭವಿಸಿಲ್ಲ. ಆದಾಗ್ಯೂ, ಪಾಕಿಸ್ತಾನಿ ನೌಕಾಪಡೆಯ ಈ ನಡವಳಿಕೆಯು 1991ರ ಏಪ್ರಿಲ್‌ನಲ್ಲಿ ಉಭಯ ದೇಶಗಳ ನಡುವೆ ನಡೆದ ಮಿಲಿಟರಿ ವ್ಯಾಯಾಮಗಳು, ಕಾರ್ಯಾಚರಣೆಗಳು ಹಾಗೂ ಪಡೆಗಳ ಚಲನವಲನಗಳ ಮುಂಗಡ ಸೂಚನೆ ಕುರಿತ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಸಮುದ್ರದಲ್ಲಿ ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಪಾಕಿಸ್ತಾನದ ಎಲ್ಲಾ ಮಿಲಿಟರಿ ಘಟಕಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಸಂಬಂಧಿತ ದ್ವಿಪಕ್ಷೀಯ ಒಪ್ಪಂದದ ನಿಬಂಧನೆಗಳನ್ನು ಗೌರವಿಸಬೇಕು ಎಂದು ಪಾಕ್ ಹಂಗಾಮಿ ರಾಯಭಾರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ ನೀಡಿದೆ.