image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

9/11 ದಾಳಿಗೂ ಮುನ್ನವೇ ಭಾರತದ ಮೇಲೂ ಕಣ್ಣಿಟ್ಟಿದ್ದ ಒಸಾಮಾ ಬಿನ್ ಲಾಡೆನ್: ಸಿಐಎ ರಹಸ್ಯ ದಾಖಲೆಗಳಿಂದ ಬಹಿರಂಗ

9/11 ದಾಳಿಗೂ ಮುನ್ನವೇ ಭಾರತದ ಮೇಲೂ ಕಣ್ಣಿಟ್ಟಿದ್ದ ಒಸಾಮಾ ಬಿನ್ ಲಾಡೆನ್: ಸಿಐಎ ರಹಸ್ಯ ದಾಖಲೆಗಳಿಂದ ಬಹಿರಂಗ

ನವದೆಹಲಿ : ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ 9/11 ಭೀಕರ ಭಯೋತ್ಪಾದಕ ದಾಳಿಗೆ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಅಮೆರಿಕದ ಬೇಗೂಢಚರ ಸಂಸ್ಥೆಯಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) ಬಿಲ್ ಕ್ಲಿಂಟನ್ ಹಾಗೂ ಜಾರ್ಜ್ ಡಬ್ಲ್ಯೂ ಬುಷ್ ಅವರ ಅಧ್ಯಕ್ಷತೆಯ ಅವಧಿಯ 70ಕ್ಕೂ ಹೆಚ್ಚು ಅತಿ ರಹಸ್ಯ ಇಂಟೆಲಿಜೆನ್ಸ್ ವರದಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. 100ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ಈ ರಹಸ್ಯ ದಾಖಲೆಗಳು, 9/11 ದಾಳಿಗಿಂತಲೂ ಮುಂಚಿತವಾಗಿಯೇ ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ದಾಳಿ ನಡೆಸಲು ಸಂಚು ರೂಪಿಸಿದ್ದ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿತ್ತು ಎಂಬ ಸತ್ಯವನ್ನು ಬಹಿರಂಗಪಡಿಸಿವೆ.

1998ರ ಆಗಸ್ಟ್ 28ರಂದು ಸಿದ್ಧಪಡಿಸಲಾಗಿದ್ದ ಸಿಐಎ ಅಧ್ಯಕ್ಷೀಯ ವರದಿಯಲ್ಲಿ "ಬಿನ್ ಲಾಡೆನ್ ಭಯೋತ್ಪಾದಕ ಜಾಲವು ಇಂದಿಗೂ ಸಕ್ರಿಯ ಭೀತಿಯಾಗಿದೆ" ಎಂಬ ಶೀರ್ಷಿಕೆಯಡಿ ಈ ಬೆದರಿಕೆಯ ವಿವರಗಳನ್ನು ದಾಖಲಿಸಲಾಗಿತ್ತು. ಲಾಡೆನ್ ಭಾರತ ಸೇರಿದಂತೆ ಪಾಕಿಸ್ತಾನ, ಈಜಿಪ್ಟ್, ಕುವೈತ್, ಸೌದಿ ಅರೇಬಿಯಾ, ಯೆಮೆನ್, ಉಗಾಂಡ ಹಾಗೂ ನೈಜೀರಿಯಾಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪ್ರಕಟಿತ ದಾಖಲೆಗಳಲ್ಲಿ ಕೆಲವು ಸೂಕ್ಷ್ಮ ಮೂಲಗಳ ವಿವರಗಳನ್ನು ಮರೆಮಾಚಲಾಗಿದ್ದು, ಭಾರತದಲ್ಲಿ ಯಾವ ನಿರ್ದಿಷ್ಟ ಸ್ಥಳವನ್ನು ಗುರಿಯಾಗಿಸಲಾಗಿತ್ತು ಅಥವಾ ದಾಳಿಯ ನಿಖರ ಯೋಜನೆಯ ದಿನಾಂಕವೇನು ಎಂಬುದು ಬಹಿರಂಗಗೊಂಡಿಲ್ಲ.

ಉತ್ತರ ಅಮೆರಿಕ, ಯುರೋಪ್ ಹಾಗೂ ಪೂರ್ವ ಏಷ್ಯಾದಲ್ಲಿ ಅತ್ಯಂತ ಭದ್ರವಾದ ಭಯೋತ್ಪಾದನಾ ಜಾಲವನ್ನು ಹೊಂದಿದ್ದ ಬಿನ್ ಲಾಡೆನ್, ಜಗತ್ತಿನ ಕನಿಷ್ಠ 60ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿರುವ ತನ್ನ ಬೆಂಬಲಿಗರು ಹಾಗೂ ಮಿತ್ರ ಉಗ್ರ ಸಂಘಟನೆಗಳ ಜಾಲವನ್ನು ಬಳಸಿಕೊಂಡು ಅಮೆರಿಕ ಮತ್ತು ಬ್ರಿಟನ್ ಮೇಲೆಯೂ ದೊಡ್ಡ ಮಟ್ಟದ ದಾಳಿಗಳಿಗೆ ಯೋಜಿಸುತ್ತಿದ್ದ ಎಂದು ಸಿಐಎ ಎಚ್ಚರಿಸಿತ್ತು. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ಶಿಬಿರಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದರೂ ಲಾಡೆನ್ ಸೇರಿದಂತೆ ಪ್ರಮುಖ ಉಗ್ರ ನಾಯಕರು ಜೀವಂತವಾಗಿದ್ದರು ಹಾಗೂ ತಮ್ಮ ಸಂಪರ್ಕ ಜಾಲವನ್ನು ಯಶಸ್ವಿಯಾಗಿ ಮುಂದುವರಿಸಿದ್ದರು. 1998ರಿಂದ 2001ರ ಅವಧಿಯ ಈ ರಹಸ್ಯ ದಾಖಲೆಗಳ ಪ್ರಕಟಣೆಯು, 9/11 ದಾಳಿಗೆ ಮುಂಚಿತವಾಗಿ ಜಾಗತಿಕ ಮಟ್ಟದಲ್ಲಿ ವ್ಯಾಪಿಸಿದ್ದ ಆತಂಕ ಮತ್ತು ಭಾರತವೂ ಆ ಬೆದರಿಕೆಯ ವ್ಯಾಪ್ತಿಯಲ್ಲಿದ್ದ ನೈಜ ಚಿತ್ರಣವನ್ನು ಜಗತ್ತಿನ ಎದುರು ತಂದಿಟ್ಟಿದೆ.

Category
ಕರಾವಳಿ ತರಂಗಿಣಿ