image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಘೇಂಡಾಮೃಗ ಬೇಟೆ ಶೂನ್ಯಕ್ಕಿಳಿಸಿದ ಭಾರತ-ನೇಪಾಳ: ಈಗ ಆವಾಸಸ್ಥಾನ ಅವನತಿ ಹಾಗೂ ಅನ್ಯ ಸಸ್ಯಗಳದ್ದೇ ಹೊಸ ಸವಾಲು

ಘೇಂಡಾಮೃಗ ಬೇಟೆ ಶೂನ್ಯಕ್ಕಿಳಿಸಿದ ಭಾರತ-ನೇಪಾಳ: ಈಗ ಆವಾಸಸ್ಥಾನ ಅವನತಿ ಹಾಗೂ ಅನ್ಯ ಸಸ್ಯಗಳದ್ದೇ ಹೊಸ ಸವಾಲು

ನವದೆಹಲಿ : ಇಂಟರ್‌ನ್ಯಾಷನಲ್ ರೈನೋ ಫೌಂಡೇಶನ್ (ಐಆರ್‌ಎಫ್) ಬಿಡುಗಡೆ ಮಾಡಿರುವ 2026ರ 'ಸ್ಟೇಟ್ ಆಫ್ ದಿ ರೈನೋಸ್' ವರದಿಯ ಪ್ರಕಾರ, 2025ರಲ್ಲಿ ಭಾರತ, ನೇಪಾಳ ಮತ್ತು ಇಂಡೋನೇಷ್ಯಾದಲ್ಲಿ ಘೇಂಡಾಮೃಗ (ಖಡ್ಗಮೃಗ) ಬೇಟೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಈ ಮೂರೂ ದೇಶಗಳಲ್ಲಿ ಕೈಗೊಂಡ ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮಗಳಿಂದಾಗಿ ಬೇಟೆ ನಿಯಂತ್ರಣಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆಯಾದರೂ, ಇದೀಗ ಆವಾಸಸ್ಥಾನಗಳ ಅವನತಿ ಹಾಗೂ ಆಕ್ರಮಣಕಾರಿ ಅನ್ಯ ಸಸ್ಯಗಳ ಬೆಳವಣಿಗೆ ಘೇಂಡಾಮೃಗಗಳ ಉಳಿವಿಗೆ ಹೊಸ ಸವಾಲಾಗಿ ಪರಿಣಮಿಸಿದೆ.

ಪ್ರಸ್ತುತ ವಿವಿಧ ಅಭಯಾರಣ್ಯಗಳಲ್ಲಿ ಘೇಂಡಾಮೃಗಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಕಾಡುಗಳಲ್ಲಿ ಬೆಳೆಯುತ್ತಿರುವ ಅನ್ಯ ಸಸ್ಯಗಳು ಇವುಗಳ ಮುಖ್ಯ ಆಹಾರವಾದ ಹುಲ್ಲಿನ ಬೆಳವಣಿಗೆಯನ್ನು ತಡೆಯುತ್ತಿದ್ದು, ಆವಾಸಸ್ಥಾನಗಳು ಹಾಳಾಗುತ್ತಿವೆ. ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಸ್ತುತ 40ಕ್ಕೂ ಹೆಚ್ಚು ಘೇಂಡಾಮೃಗಗಳಿದ್ದು, ಅಲ್ಲಿಯೂ ಹುಲ್ಲುಗಾವಲುಗಳು ಅನ್ಯ ಸಸ್ಯಗಳಿಂದ ನಾಶವಾಗುತ್ತಿವೆ. ಹೀಗಾಗಿ ಇವುಗಳ ಆಹಾರ ಮತ್ತು ವಾಸಸ್ಥಳದ ಸುಧಾರಣೆಗೆ ತಕ್ಷಣದ ಕ್ರಮಗಳ ಅಗತ್ಯವಿದೆ.

ಭಾರತವು ಅಸ್ಸಾಂನಲ್ಲಿ ಕಟ್ಟುನಿಟ್ಟಾದ ಕಣ್ಗಾವಲು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಸಕ್ರಿಯ ಸಹಯೋಗದೊಂದಿಗೆ ಬೇಟೆ ನಡೆಯುವ ಮುನ್ನವೇ ಅದನ್ನು ತಡೆಗಟ್ಟುವ ಪರಿಣಾಮಕಾರಿ ಸಂರಕ್ಷಣಾ ಮಾದರಿಯನ್ನು ಅನುಸರಿಸಿದೆ. ಮತ್ತೊಂದೆಡೆ ನೇಪಾಳವು ಘೇಂಡಾಮೃಗಗಳ ಜೊತೆಗೆ ಹುಲಿ ಮತ್ತು ಆನೆಗಳ ಬೇಟೆಯನ್ನೂ ಏಕಕಾಲದಲ್ಲಿ ಶೂನ್ಯಕ್ಕಿಳಿಸುವ ಮೂಲಕ ಈ ಮೂರೂ ಪ್ರಮುಖ ಪ್ರಾಣಿಗಳನ್ನು ಸಂರಕ್ಷಿಸಿದ ವಿಶ್ವದ ಮೊದಲ ದೇಶ ಎಂಬ ಐತಿಹಾಸಿಕ ಸಾಧನೆ ಮಾಡಿದೆ.

ವರದಿಯ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಅಸ್ಸಾಂನಲ್ಲಿನ ಒಟ್ಟು ಘೇಂಡಾಮೃಗಗಳ ಸಂಖ್ಯೆ 4,075ಕ್ಕೆ ಏರಿಕೆಯಾಗಿದೆ. 2022ರಲ್ಲಿ 2,600 ಘೇಂಡಾಮೃಗಗಳನ್ನು ಹೊಂದಿದ್ದ ಕಾಜಿರಂಗ ಉದ್ಯಾನವನ ಸೇರಿದಂತೆ, ಉತ್ತರ ಪ್ರದೇಶದ ದೂಧ್ವಾ ಹಾಗೂ ಪಶ್ಚಿಮ ಬಂಗಾಳದ ಜಲ್ದಾಪಾರಾ ಮತ್ತು ಗೊರುಮಾರಾ ಉದ್ಯಾನಗಳಲ್ಲಿಯೂ ಅಸ್ಸಾಂನಿಂದ ತಂದು ಬಿಡಲಾದ ಖಡ್ಗಮೃಗಗಳ ಸಂಖ್ಯೆ ವೃದ್ಧಿಸಿದೆ. ಪ್ರಸ್ತುತ ನೇಪಾಳದಲ್ಲಿ 752 ಹಾಗೂ ಇಂಡೋನೇಷ್ಯಾದಲ್ಲಿ ಸುಮಾತ್ರಾ ಮತ್ತು ಜವಾ ತಳಿಯ 100 ಘೇಂಡಾಮೃಗಗಳಿವೆ.

Category
ಕರಾವಳಿ ತರಂಗಿಣಿ