image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

2026ರ ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ಬಿಜೆಪಿ-ಕಾಂಗ್ರೆಸ್ ವಾಗ್ದಾಳಿ

2026ರ ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ಬಿಜೆಪಿ-ಕಾಂಗ್ರೆಸ್ ವಾಗ್ದಾಳಿ

ನವದೆಹಲಿ : ನವದೆಹಲಿಯಲ್ಲಿ ಆಯೋಜನೆಗೊಂಡಿರುವ 2026ರ ಬ್ರಿಕ್ಸ್ (BRICS) ಶೃಂಗಸಭೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಸಮರ ಶುರುವಾಗಿದೆ. ಇತ್ತೀಚಿನ ಶೃಂಗಸಭೆಗಳಿಂದ ಭಾರತಕ್ಕೆ ದೊರೆತ ನೈಜ ಪ್ರಯೋಜನವೇನು ಎಂದು ಪ್ರಶ್ನಿಸುವ ಮೂಲಕ ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ನೀಡಿದ್ದ ಹೇಳಿಕೆ ಈ ಜಟಾಪಟಿಗೆ ಕಾರಣವಾಗಿದೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಚಿದಂಬರಂ, ಭಾರತವು ಬ್ರಿಕ್ಸ್, ಶಾಂಘೈ ಸಹಕಾರ ಸಂಸ್ಥೆ (SCO), ಜಿ20 ಮತ್ತು ಕ್ವಾಡ್ (QUAD) ನಂತಹ ಪ್ರಮುಖ ಬಹುಪಕ್ಷೀಯ ಒಕ್ಕೂಟಗಳ ಭಾಗವಾಗಿದೆ, ಆದರೆ ಕಳೆದ ಎರಡ್ಮೂರು ಶೃಂಗಸಭೆಗಳು ಯಾವುದೇ ಸ್ಪಷ್ಟ ಫಲಿತಾಂಶಗಳನ್ನು ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಎಷ್ಟು ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಆಗಮಿಸುತ್ತಿದ್ದಾರೆ ಎಂಬುದು ಮುಖ್ಯವಲ್ಲ, ಈ ಸಭೆಗಳಿಂದ ದೇಶಕ್ಕೆ ಏನು ಸಿಕ್ಕಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದ್ದರು.

ಚಿದಂಬರಂ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್‌ಗೆ ರಾಜತಾಂತ್ರಿಕತೆಯ ಕನಿಷ್ಠ ತಿಳುವಳಿಕೆಯೂ ಇಲ್ಲ ಎಂದು ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷವು ವಿದೇಶಾಂಗ ನೀತಿಯನ್ನು ಕೇವಲ 'ವ್ಯಾಪಾರ' ಅಥವಾ 'ಕೊಡು-ಕೊಳ್ಳುವಿಕೆಯ' ಧೋರಣೆಯಿಂದ ನೋಡುತ್ತಿದೆ ಎಂದು ಬಿಜೆಪಿ ಸಂಸದ ನಲಿನ್ ಕೊಹ್ಲಿ ಆರೋಪಿಸಿದ್ದಾರೆ. ಜಾಗತಿಕ ಮಟ್ಟದ ಅನೇಕ ರಾಷ್ಟ್ರಗಳ ಮುಖ್ಯಸ್ಥರು ದೇಶಕ್ಕೆ ಆಗಮಿಸುತ್ತಿರುವ ಇಂತಹ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಭಾರತ ಆಯೋಜಿಸುತ್ತಿರುವಾಗ, ಶೃಂಗಸಭೆಯ ಮಹತ್ವವನ್ನು ಪ್ರಶ್ನಿಸುತ್ತಿರುವುದು ಆಶ್ಚರ್ಯಕರವಾಗಿದೆ ಎಂದಿರುವ ಕೊಹ್ಲಿ, ಸ್ಪಷ್ಟ ಫಲಿತಾಂಶಗಳ ಬಗ್ಗೆಯೇ ಮಾತನಾಡುವುದಾದರೆ 1947 ರಿಂದ 2014 ರವರೆಗಿನ ಕಾಂಗ್ರೆಸ್ ಆಡಳಿತಾವಧಿಯ ಸಂಪೂರ್ಣ ವಿದೇಶಾಂಗ ನೀತಿಯನ್ನೇ ಪ್ರಶ್ನಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಯಾವುದೇ ಬಲವಾದ ಆಧಾರವಿಲ್ಲದಿದ್ದರೂ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ನಲಿನ್ ಕೊಹ್ಲಿ ಹೇಳಿದ್ದಾರೆ. ಚಿದಂಬರಂ ಅವರ ತರ್ಕದಂತೆ ಪ್ರಯೋಜನವಿಲ್ಲ ಎಂದಾದರೆ, ನಾಳೆ ಯಾರಾದರೂ ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ ಎಂದ ತಕ್ಷಣ ಕಾಂಗ್ರೆಸ್ ತನ್ನ ಪಕ್ಷವನ್ನೇ ಮುಚ್ಚಿಬಿಡುತ್ತದೆಯೇ ಎಂದು ಸವಾಲೆಸೆದಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ತನ್ನದೇ ನಿಲುವಿನ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿಕೊಳ್ಳುತ್ತಿದ್ದು, ಅನೇಕ ವಿಷಯಗಳಿಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ, ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಭಾರತವು 18 ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ. ಈ ಶೃಂಗಸಭೆಯು ಬ್ರಿಕ್ಸ್​​ ಸದಸ್ಯ ದೇಶಗಳು, ಪಾಲುದಾರ ರಾಷ್ಟ್ರಗಳ ನಾಯಕರು ಮತ್ತು ಆಹ್ವಾನಿತರನ್ನು ಒಂದೆಡೆ ತರಲಿದೆ. ಮೊದಲ ದಿನ ಸದಸ್ಯರ ಮುಚ್ಚಿದ ಬಾಗಿಲ ಸಭೆ, 'ಭಾರತ್ ಇನ್ನೋವೇಟ್ಸ್' ಪ್ರದರ್ಶನ, ನಾಯಕರ ಫೋಟೋಶೂಟ್, ಜಂಟಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ರಧಾನಿ ಮೋದಿ ಆಯೋಜಿಸುವ ವಿಶೇಷ ಔತಣಕೂಟ ನಡೆಯಲಿದೆ. ಎರಡನೇ ದಿನ ಪಾಲುದಾರ ದೇಶಗಳ ನಾಯಕರ ಆಗಮನದ ನಂತರ ಚೇತರಿಕೆ (resilience), ನಾವೀನ್ಯತೆ (innovation), ಸಹಕಾರ (cooperation) ಮತ್ತು ಸುಸ್ಥಿರತೆ (sustainability) ವಿಷಯಗಳ ಮೇಲೆ ಮುಕ್ತ ಚರ್ಚೆ ಸಭೆ ನಡೆಯಲಿದೆ.

Category
ಕರಾವಳಿ ತರಂಗಿಣಿ