image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಸ್ತೆ ಅಗಲೀಕರಣಕ್ಕೆ ಕದಲದ 170 ವರ್ಷ ಹಳೆಯ ಖಡೇ ಹನುಮಂತನ ವಿಗ್ರಹ; ತಳಪಾಯ ಸ್ಕ್ಯಾನ್ ಮಾಡಲು ನಿರ್ಧಾರ

ರಸ್ತೆ ಅಗಲೀಕರಣಕ್ಕೆ ಕದಲದ 170 ವರ್ಷ ಹಳೆಯ ಖಡೇ ಹನುಮಂತನ ವಿಗ್ರಹ; ತಳಪಾಯ ಸ್ಕ್ಯಾನ್ ಮಾಡಲು ನಿರ್ಧಾರ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 2028ರ ಸಿಂಹಸ್ಥ ಕುಂಭಮೇಳದ ಪೂರ್ವಭಾವಿಯಾಗಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಅಪರೂಪದ ಹಾಗೂ ಕುತೂಹಲಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಕಂಥಾಲ್ ಚೌರಾಹಾದಲ್ಲಿರುವ ಸುಮಾರು 170 ವರ್ಷಗಳಷ್ಟು ಹಳೆಯ ಖಡೇ ಹನುಮಾನ್ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಲಾಗಿದ್ದರೂ, ಅಲ್ಲಿರುವ ಹನುಮಂತನ ನಿಂತ ಭಂಗಿಯ ವಿಗ್ರಹವನ್ನು ಮಾತ್ರ ಸ್ಥಳಾಂತರಿಸಲು ಸಾಧ್ಯವಾಗಿಲ್ಲ.

ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ಭಾರಿ ಕ್ರೇನ್‌ಗಳು ಮತ್ತು ಜೆಸಿಬಿ ಯಂತ್ರಗಳನ್ನು ಬಳಸಿ ವಿಗ್ರಹವನ್ನು ಟಂಕಿ ಚೌಕದ ಸಮೀಪದ ನೂತನ ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲು ಸತತ ನಾಲ್ಕು ಬಾರಿ ಪ್ರಯತ್ನ ನಡೆಸಿತ್ತು. ಆದರೆ, ಯಂತ್ರಗಳನ್ನು ಬಳಸಿದರೂ ವಿಗ್ರಹವು ಇಂಚೂ ಕದಲದೇ ಇದ್ದುದರಿಂದ ಸದ್ಯಕ್ಕೆ ಯಾಂತ್ರಿಕ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಈ ಐತಿಹಾಸಿಕ ವಿಗ್ರಹಕ್ಕೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಸಲಹೆ ಪಡೆಯಲಾಗುತ್ತಿದೆ. ವಿಗ್ರಹದ ತಳಭಾಗದ ರಚನೆ ಮತ್ತು ನೆಲದೊಳಗಿನ ಆಳವನ್ನು ಅಧ್ಯಯನ ಮಾಡಲು ತಳಪಾಯವನ್ನು ತಾಂತ್ರಿಕವಾಗಿ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ. ತಜ್ಞರು ಮತ್ತು ಇಂಜಿನಿಯರ್‌ಗಳ ತಂಡ ನೀಡುವ ವರದಿಯ ಆಧಾರದ ಮೇಲಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಗ್ರಹವು ಸ್ಥಳಾಂತರಗೊಳ್ಳದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಭಕ್ತರು ಇದನ್ನು 'ದೈವ ಸಂಕೇತ' ಎಂದು ನಂಬುತ್ತಿದ್ದಾರೆ. ದೇವಸ್ಥಾನದ ಸುತ್ತಮುತ್ತ ಕೋತಿಗಳ ಗುಂಪು ಸೇರಿರುವ ವಿಡಿಯೋಗಳು ವೈರಲ್ ಆಗಿದ್ದು, ಸ್ಥಳದಲ್ಲಿ ನಿತ್ಯ ಪೂಜೆ-ಆರತಿಗಳು ಮುಂದುವರಿದಿವೆ. 12 ವರ್ಷಕ್ಕೊಮ್ಮೆ ನಡೆಯುವ ಪವಿತ್ರ ಸಿಂಹಸ್ಥ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಜಾರಿಯಲ್ಲಿದ್ದು, ಈ ಘಟನೆಯು ಭಕ್ತಿಯ ಜೊತೆಗೆ ತಾಂತ್ರಿಕ ಕುತೂಹಲಕ್ಕೂ ಕಾರಣವಾಗಿದೆ.

Category
ಕರಾವಳಿ ತರಂಗಿಣಿ